

ವಿಜಯವಾಣಿ ಸುದ್ದಿಜಾಲ ಲಿಂಗಸುಗೂರು
ತಾಲೂಕಿನ ಗ್ರಾಪಂ ವ್ಯಾಪ್ತಿಯ ಜನರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತಸಂಘದ ನೇತೃತ್ವದಲ್ಲಿ ನಿವಾಸಿಗಳು ಎಸಿ ಕಚೇರಿ ಆವರಣದಲ್ಲಿ ಬುಧವಾರ ಧರಣಿ ನಡೆಸಿದರು.
ತಾಲೂಕಿನ ಗೆಜ್ಜಲಗಟ್ಟಾ ಗ್ರಾಪಂ ವ್ಯಾಪ್ತಿಯ ವೀರಾಪುರ ಗ್ರಾಮದಲ್ಲಿ ಎಸ್ಸಿ-ಎಸ್ಟಿ ಜನಾಂಗಕ್ಕೆ ರುದ್ರಭೂಮಿ ನೀಡಬೇಕು ಮತ್ತು ಡಿಸಿ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯದ ವೇಳೆ ಸಲ್ಲಿಸಿದ ಅಹವಾಲುಗಳ ಮಾಹಿತಿ ನೀಡಬೇಕು.
ಜಲ ಜೀವನ ಮಿಷನ್ ಯೋಜನೆಯಡಿ ಕೈಗೊಂಡ ಕಳಪೆ ಕಾಮಗಾರಿಯಿಂದ ರಸ್ತೆಗಳು ಹಾಳಾಗಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಡ್ಡೋಣಿ, ತವಗ, ರೋಡಲಬಂಡಾ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಬೇಕು.
ವೀರಾಪುರ ಗ್ರಾಮಕ್ಕೆ ಅಂಗನವಾಡಿ ಕಟ್ಟಡ ಮಂಜೂರು ಮಾಡಬೇಕು. ನಾಗಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶೀಘ್ರ ಪೂರ್ಣಗೊಳಿಸಬೇಕು. ಬರಗಾಲ, ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆಗೆ ಪರಿಹಾರ ನೀಡಬೇಕು.
ಮುದಗಲ್ ಪಟ್ಟಣದ ಚರಂಡಿ ನೀರು ಕೆರೆಗೆ ಹೋಗದಂತೆ ತಡೆಯಬೇಕು. ವೀರಾಪುರ, ಚಿಕ್ಕನಗನೂರು ಸೇರಿ ಇತರೆಡೆ ಕೋತಿಗಳ ಹಾವಳಿ ತಪ್ಪಿಸಬೇಕು. ಯರಡೋಣದ ಸರ್ಕಾರಿ ಜಮೀನಿನಲ್ಲಿ ಬಗರ್ ಹುಕುಂ ಸಾಗುವಳಿಗೆ ಅರ್ಜಿ ಸಲ್ಲಿಸಿದ ರೈತರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.