ಜೆಜೆಎಂ ಪೈಪ್‌ಲೈನ್ ಅಳವಡಿಕೆ ಕಳಪೆ; ಕ್ರಮಕ್ಕೆಗ್ರಾಪಂ ಸದಸ್ಯರ ಮನವಿ

JJM.
ಹನುಮಸಾಗರದಲ್ಲಿ ಕೈಗೊಳಲಾದ ಜೆಜೆಎಂ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳನ್ನು ಭಾನುವಾರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಪರಿಶೀಲಿಸಿದರು. ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ತಾಪಂ ಇಒ ಶಿವಪ್ಪ ಸುಬೇದಾರ, ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ವಾಸು ಇತರರಿದ್ದರು.
Published on

ಹನುಮಸಾಗರ: ಜೆಜೆಎಂ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಅಸಮರ್ಪಕದಿಂದ ಕೂಡಿದ್ದು, ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.

ಗ್ರಾಪಂ ಕಾರ್ಯಾಲಯದಲ್ಲಿ ಭಾನುವಾರ ಆಡಳಿತ ಮಂಡಳಿ ಸಭೆಯಲ್ಲಿ ಜೆಜೆಎಂ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಕಳಪೆಯಾಗಿರುವ ಕುರಿತು ಪ್ರಸ್ತಾಪಿಸಿದ ಗ್ರಾಪಂ ಸದಸ್ಯರು, ಮೂರು ವರ್ಷ ಕಳೆದರೂ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಡಿಪಿಆರ್ ಪ್ರಕಾರ ಒಟ್ಟು 3367 ಮನೆಗಳಲ್ಲಿ 2900 ನಲ್ಲಿಗಳಿಗೆ ಈಗಾಗಲೇ ನೀರು ಪೂರೈಕೆಯಾಗಬೇಕಾಗಿತ್ತು. ಆದರೆ, ಈವರೆಗೆ ಒಂದು ನಲ್ಲಿಗೂ ನೀರು ಪೂರೈಕೆಯಾಗದಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಇಒ ತಿಳಿಸಿದರು.

ಪೈಪ್‌ಲೈನ್ ಅಳವಡಿಕೆಗೆ ಗುತ್ತಿಗೆ ಪಡೆದಂತಹ ಮುಖ್ಯ ಗುತ್ತಿಗೆದಾರನ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮವನ್ನು ಕೈಗೊಳ್ಳಬೇಕಾಗಿದೆ. ತಹಸೀಲ್ದಾರ್ ಮೂಲಕ ಪ್ರಕರಣ ದಾಖಲು ಮಾಡಲು ಒಂದು ತಿಂಗಳು ಕಳೆಯುತ್ತದೆ. ಅದೇ ಗ್ರಾಪಂ ಸದಸ್ಯರ ಮೂಲಕ ಪ್ರಕರಣ ದಾಖಲಿಸಿದರೆ ಕೆಲವೇ ದಿನಗಳು ಬೇಕಾಗುತ್ತದೆ.

ಗ್ರಾಮದಲ್ಲಿ ನಡೆದಿರುವ ಕಾಮಗಾರಿಯ ವಿವರವನ್ನು ಸಲ್ಲಿಸಿ ಎಫ್‌ಐಆರ್ ದಾಖಲಿಸಬಹುದಾಗಿದೆ. 2020ರ ಮಾರ್ಚ್‌ನಲ್ಲಿ ಕಾಮಗಾರಿ ಆರಂಭವಾಗಿದ್ದು, ಇಲ್ಲಿಯವರೆಗೆ ಮುಗಿಸದಿರುವುದು, ಕಳಪೆ ಕಾಮಗಾರಿ ನಡೆಸಿರುವುದು ಗುತ್ತಿಗೆದಾರರ ಅಶಿಸ್ತು ತೋರಿಸುತ್ತದೆ ಎಂದು ಗರಂ ಆದರು.

ಅಂಗನವಾಡಿ, ಶಾಲಾ ಕಾಲೇಜು, ಸರ್ಕಾರಿ ಆಸ್ಪತ್ರೆಗಳಲ್ಲಿ ನರೇಗಾ ಯೋಜನೆಯಡಿ ವಿವಿಧ ಸೌಲಭ್ಯವನ್ನು ಒದಗಿಸುವ ಬಗ್ಗೆ, ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸಿಇಒ ಸೂಚಿಸಿದರು. ನಂತರ ವಾರ್ಡ್‌ಗಳಲ್ಲಿ ನಡೆದಿರುವ ಜೆಜೆಎಂ ಕಾಮಗಾರಿ ಪರಿಶೀಲಿಸಿದರು.

ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ತಾಪಂ ಇಒ ಶಿವಪ್ಪ ಸುಬೇದಾರ, ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ವಾಸು, ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ತಾಪಂ ಐಇಸಿ ಕೋ ಆರ್ಡಿನೇಟರ್ ಚಂದ್ರಶೇಖರ ಹಿರೇಮಠ, ಸಿಡಿಪಿಒ ಯಲ್ಲಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net