

ಬೆಂಗಳೂರು: ಬಿಬಿಎಂಪಿಯು ತನ್ನ ಶಾಲೆಗಳಲ್ಲಿ ಹೊರ ಗುತ್ತಿಗೆ ಶಿಕ್ಷಕರ ಸೇವೆ ಪೂರೈಸಲು ಮೂರು ಸೆಕ್ಯೂರಿಟಿ ಏಜೆನ್ಸಿ ಪರವಾನಗಿ ನೀಡಿರುವುದಕ್ಕೆ ಶಾಸಕ ಸುರೇಶ್‌ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರನ್ನು ನೇಮಿಸಿಕೊಳ್ಳಲು ಸೇವೆ ಒದಗಿಸುವುದಕ್ಕಾಗಿ ಶಿಕ್ಷಣ ಕ್ಷೇತ್ರದ ಅರಿವು ಇರುವವರು ಮತ್ತು ನುರಿತ ಏಜೆನ್ಸಿಯವರಿಗೆ ನೀಡಬೇಕು. ಆದರೆ, ಶಿಕ್ಷಕ ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿಗೆ ವಹಿಸಿರುವುದು ನೀಡಿರುವುದು ಬಿಬಿಎಂಪಿಯ ಹುಚ್ಚು ನಿರ್ಧಾರ ಹಾಗೂ ಹಾಸ್ಯಾಸ್ಪದ ನಡೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.
ಈ ಹಿಂದೆ ಇದೇ ವಿಷಯವಾಗಿ ಉಪಮುಖ್ಯಮಂತ್ರಿ ಹಾಗೂ ಪಾಲಿಕೆಯ ಮುಖ್ಯ ಆಯುಕ್ತರಿಗೆ ಪತ್ರ ಬರದು ಸರಿಯಲ್ಲದ ನಿರ್ಧಾರವನ್ನು ಕೈಬಿಡಲು ಒತ್ತಾಯಿಸಿದ್ದಾರೆ. ಆಗ ಪ್ರಸ್ತಾಪವನ್ನು ಪರಿಶೀಲಿಸುವ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೀಗ ಮತ್ತೆ ಹಿಂದಿನ ತೀರ್ಮಾನದಂತೆ ಸೆಕ್ಯೂರಿಟಿ ಏಜೆನ್ಸಿ ಗುತ್ತಿಗೆ ವಹಿಸಿರುವುದು ಪಾಲಿಕೆ ಶಾಲೆಗಳ ಗುಣಮಟ್ಟ ಹೇಗಿರುತ್ತದೆ ಎಂಬ ಅನುಮಾನ ಹುಟ್ಟಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಶಾಲೆಗಳಲ್ಲಿ 700ಕ್ಕೂ ಹೆಚ್ಚು ಹೊರಗುತ್ತಿಗೆ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಇಂತಹ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ವರ್ಗದ ಮಕ್ಕಳಿಗೆ ಗುಣಮಟ್ಟದ ಕಲಿಕೆಯ ವಾತಾವರಣ ಕಲ್ಪಿಸುವ ಜತೆಗೆ ಗುಣಮಟ್ಟದ ಬೋಧಕ ವೃಂದವನ್ನು ನಿಯೋಜಿಸಲು ಪಾಲಿಕೆ ಕ್ರಮ ಕೈಗೊಳ್ಳಬೇಕಿತ್ತು. ಈ ಅಂಶವನ್ನು ಪರಿಗಣಿಸದೆ ಅಧಿಕಾರಿ ವರ್ಗವು ಭದ್ರತಾ ಸಿಬ್ಬಂದಿ ನೇಮಿಸುವ ಸೆಕ್ಯೂರಿಟಿ ಏಜೆನ್ಸಿಗಳಿಗೆ ಯಾವ ಮಾನದಂಡ ಆಧರಿಸಿ ಶಿಕ್ಷಕರ ಆಯ್ಕೆಗೆ ಗುತ್ತಿಗೆ ನೀಡಲಾಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಜತೆಗೆ ತರಾತುರಿಯಲ್ಲಿ ಅನುಮತಿ ನೀಡಿರುವುದು ಅಧಿಕಾರಿಗಳ ಬೇಜವಾಬ್ದಾರಿಯೂ ಎದ್ದುಕಾಣುತ್ತದೆ. ಒಟ್ಟಾರೆ ಶಿಕ್ಷಣ ಕ್ಷೇತ್ರವನ್ನೂ ಗುತ್ತಿಗೆ ಕೊಡ ಹೊರಟಿರುವ ಬಿಬಿಎಂಪಿಯ ನಿಲುವು ಸಾರ್ವಜನಿಕರಿಗೆ ಯಾವ ಸಂದೇಶ ನೀಡಲು ಹೊರಟಿದೆ ಎಂದು ಶಾಸಕರು ಪ್ರಶ್ನಿಸಿದ್ದಾರೆ.