ಗುತ್ತಿಗೆ ನೌಕರರ ಹಿತ ಕಾಯುವದು ಇಲಾಖೆ ಅಧಿಕಾರಿ ಹಾಗೂ ಏಜೆನ್ಸಿಗಳ ಜವಾಬ್ದಾರಿ - ಕೆ. ಗುರುಪ್ರಸಾದ

28GDG01
Published on

ಗದಗ: ಉದ್ದಿಮೆಗೆ ಸಂಬಂಧಿಸಿದ ಕಾನೂನಿನ ಎಲ್ಲ ನಿಯಮಗಳನ್ನು ಅರಿತುಕೊಂಡು ಮೂಲ ಮಾಲೀಕರು ಹಾಗೂ ಗುತ್ತಿಗೆದಾರರು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವದರ ಜೊತೆಗೆ ಕಾಲ ಕಾಲಕ್ಕೆ ಸರಿಯಾದ ವೇತನವನ್ನು ಒದಗಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವಾಗಳ ಪ್ರಾಧಿಕಾರ, ಇ.ಪಿ.ಎಫ್.ಓ ಹಾಗೂ ಇ.ಎಸ್ ಐ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ  ಜರುಗಿದ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ನಿಗಮ ಮಂಡಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯಗಳ ಕುರಿತು  ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮೂಲ ಮಾಲೀಕರು ಮತ್ತು ಗುತ್ತಿಗೆದಾರರು ಕರ್ನಾಟಕ ಸರಕಾರ ನೀಡಿರುವ ಅಧಿಸೂಚನೆಯ ಅನುಸೂಚಿತ ಉದ್ದಿಮೆಗೆ ಸಂಬಂಧಿಸಿದಂತೆ ಕಾನೂನಿನ ಎಲ್ಲಾ ನಿಯಮಾವಳಿಗಳನ್ನು  ತಿಳಿದುಕೊಂಡು ಕಾರ್ಮಿಕರ ಸಮಸ್ಯೆಗಳನ್ನು  ಅರಿತು ಅವರಿಗೆ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದರು.  

ಮಾಲಿಕರು, ಗುತ್ತಿಗೆದಾರರು ವೇತನ ಕಾಯ್ದೆಗಳನ್ನು ಸರಿಯಾಗಿ ಅರಿತುಕೊಂಡು.  ಕಾನೂನು ಎಲ್ಲರಿಗೂ ಸಮಾನವಾಗಿದ್ದು ಕಾರ್ಮಿಕನು ಕೆಲಸದ ಸಮಯದಲ್ಲಿ  ಅಪಘಾತಕ್ಕಿಡಾಗಿ  ಘಾಯಗೊಂಡಿದ್ದರೆ ಅಥವಾ ಸಾವಿಗಿಡಾದರೆ ಅಂತಹ ಕಾರ್ಮಿಕನಿಗೆ ಪರಿಹಾರವನ್ನು ನೀಡಬೇಕಾಗುತ್ತದೆ. ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಅಗತ್ಯದ ಸೌಲಭ್ಯಗಳನ್ನು ಒದಗಿಸುವದರ ಜೊತೆಗೆ ಅಗತ್ಯದ ಸುರಕ್ಷಾ ಸಾಮಗ್ರಿಗಳನ್ನು ಒದಗಿಸಿ ಅವುಗಳ ಬಳಕೆ ಕುರಿತು ಅರಿವು ನೀಡಬೇಕು. ಒಂದು ವೇಳೆ ಕಾರ್ಮಿಕರು ಕೆಲಸದ ಸಮಯದಲ್ಲಿ ಮಾಲೀಕರ ಸೂಚನೇ ಹಾಗೂ ಸುರಕ್ಷಾ ಸಾಮಗ್ರಿಗಳನ್ನು ಬಳಸದೇ ಅಪಘಾತಕ್ಕಿಡಾದಲ್ಲಿ ಅಂತಹ ಕಾರ್ಮಿಕರಿಗೆ ಪರಿಹಾರ ದೊರಕುವುದಿಲ್ಲ. ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಅಪಘಾತಕ್ಕೀಡಾದರೆ ನಷ್ಟ ಪರಿಹಾರ ಅರ್ಜಿಯನ್ನು ೨ ವರ್ಷದ ಒಳಗೆ ನ್ಯಾಯಾಲಯದಲ್ಲಿ ಸಲ್ಲಿಸಬಹುದಾಗಿ ಎಂದು ಗುರುಪ್ರಸಾದ ಕೆ. ಹೇಳಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಮಾತನಾಡಿ ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ವೇತನದ ಅಧಿಸೂಚನೆಗಳಂತೆ ಕನಿಷ್ಠ ವೇತನದ ದರಗಳಲ್ಲಿ ವೇತನವನ್ನು ಪಾವತಿಸಬೇಕು. ಮೂಲ ಮಾಲೀಕರು ತಮ್ಮ ಗುತ್ತಿಗೆದಾರರು ಪಾವತಿಸಿರುವ ವೇತನದ ಕನಿಷ್ಠ ವೇತನದ ದರಕ್ಕಿಂತ ಕಡಿಮೆ ಇಲ್ಲದಂತೆ ಪಾವತಿಸಿರುತ್ತಾರೆಯೇ ಎಂದು ದಾಖಲೆಗಳ ಮೂಲಕ ಸರಿ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಗುತ್ತಿಗೆ ನೌಕರದಾರ ತಪ್ಪು ಮಾಡಿದಾಗ ಏಕಾಏಕಿ ಅವರನ್ನು ಕೆಲಸದಿಂದ ತೆಗೆಯಬಾರದು. ಒಂದೆರೆಡು ಸಲ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಬೇಕು. ತಪ್ಪುಗಳು ಮರುಕಳಿಸಿದಾಗ ನಿಯಮಾನುಸಾರ ನೊಟಿಸ್ ಜಾರಿಗೊಳಿಸಿ ವಿಚಾರಣೆಗೊಳಪಡಿಸಿ ಕೆಲಸದಿಂದ ವಜಾ ಮಾಡಬೇಕು. ಗುತ್ತಿಗೆ ನೌಕರರ ಸಹ ಸರ್ಕಾರಿ ನೌಕರರಗಿಂತ ಹೆಚ್ಚಿನ ಕಾರ್ಯ ಮಾಡುವವರಿದ್ದು ಅವರನ್ನು ಪ್ರಶಂಸಿಬೇಕು ಎಂದರು.

ಸರ್ಕಾರಿ ನೌಕರಿ ಸಂಘದ ಅಧ್ಯಕ್ಷರಾದ ರವಿ ಗುಂಜಿಕರ ಅವರು ಮಾತನಾಡಿ  ಪಿ.ಎಫ್. ಹಾಗೂ ಇ.ಎಸ್.ಐಗಳ ಬಗ್ಗೆ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಿಳಿದುಕೊಂಡಿರಬೇಕು. ಗುತ್ತಿಗೆ ನೌಕರನಿಗೆ ನಿಯಮಿತವಾಗಿ ಪಿ.ಎಫ್. ಸಂಧಾಯವಾಗುತ್ತಿರುವ ಕುರಿತು ನಿಗಾವಹಿಸಿ ಈ ವಿಷಯದಲ್ಲಿ ಯಾವುದೆ ಪ್ರಕರಣಗಳು ದಾಖಲೆಯಾಗದ ಹಾಗೆ ನೋಡಿಕೊಳ್ಳಲು ಅನುಕೂಲವಾಗಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರಾದ ಡಿ.ಜಿ.ನಾಗೇಶ ಅವರು ಮಾತನಾಡಿ ಗುತ್ತಿಗೆ ನೌಕರರಿಗೆ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುವದು ಇಲಾಖೆಯ ಅಧಿಕಾರಿ ಹಾಗೂ ಏಜೆನ್ಸಿಯ ಕರ್ತವ್ಯ. ನೌಕರರ ಹಿತ ಕಾಯಲು ಹಲವಾರು ಕಾನೂನುಗಳು ಜಾರಿಯಲ್ಲಿವೆ. ೨೦೨೦-೨೧ರಲ್ಲಿ ಲೋಕಾಯುಕ್ತದಲ್ಲಿ ಸ್ವಯಂ ಪ್ರಕರಣ ದಾಖಲಿಸಿಕೊಂಡು ಇಲಾಖೆ ಅಧಿಕಾರಿಗಳಿಗೆ ಹಾಗೂ ಏಜೆನ್ಸಿ ಮಾಲೀಕರು ವಹಿಸಬೇಕಾದ ಮಾರ್ಗಸೂಚಿಗಳ ಕುರಿತು ತಿಳಿಸಿಕೊಡಲಾಗಿದೆ. ನೌಕರರ ಹಿತ ಕಾಯುವದು ಇಲಾಖೆ ಹಾಗೂ ಗುತ್ತಿಗೆ ಏಜೆನ್ಸಿಯ ಜವಾಬ್ದಾರಿಯಾಗಿದೆ. ಗುತ್ತಿಗೆ  ಕಾರ್ಮಿಕರ ಷೋಷಣೆಗೆ ಒಳಗಾಗುತ್ತಿರುವ ಕಾರಣದಿಂದ ಸರ್ಕಾರಿ ಮೂಲ ಮಾಲಿಕರು, ಗುತ್ತಿಗೆದಾರರ ವೇತನದ ಮಾಹಿತಿಯನ್ನು  ಯಾವ ರೀತಿಯಾಗಿ ಮಾಡಬೇಕು, ಹೇಗೆ ನೀಡಬೇಕು ಎಂದು ತಿಳಿಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿಸದ್ದ ಇ.ಪಿ.ಎಫ್.ಓ ಅನುಷ್ಠಾನಾಧಿಕಾರಿ ಅಲಿಸ್ಟಾರ ಬಿ.ಎಲ್, ಇ.ಎಸ್.ಆಯ್.ಸಿ ಶಾಖಾ ವ್ಯವಸ್ಥಾಪಕರಾದ ವಾಯ್.ಎಸ್.ಪಾಟೀಲ ಅವರುಗಳು ಶಾಸನಾತ್ಮಕ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ  ಜಿಲ್ಲಾ ಪಂಚಾಯತ್. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಬಾಬಾಸಾಹೇಬ ನೇಮಗೌಡ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಭೀಮರಾವ್ ಜಾಧವ ಸೇರಿದಂತೆ ವಿವಿಧ  ಇಲಾಖೆಯ ಅಧಿಕಾರಿಗಳು ಹಾಜರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net