ಆರೇಳು ತಿಂಗಳಿನಿಂದ ಗುತ್ತಿಗೆ ವೈದ್ಯರಿಗೆ ಸಿಗದ ಸಂಬಳ!

06_HSN_01
Published on

ಹಾಸನ: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಹಾಸನ ಜಿಲ್ಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಸರ್ಕಾರ ಅವರಿಗೆ ಆರೇಳು ತಿಂಗಳಿನಿಂದ ಸಂಬಳವನ್ನೇ ನೀಡದೆ ಸತಾಯಿಸುತ್ತಿದೆ. ಸಂಬಳಕ್ಕಾಗಿ ಗುತ್ತಿಗೆ ವೈದ್ಯರು ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 51 ವೈದ್ಯರಿಗೆ 6-7 ತಿಂಗಳಿನಿಂದ ಸಂಬಳ ನೀಡಿಲ್ಲ. ಸಂಬಳ ನೀಡುವಂತೆ ವೈದ್ಯರು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಸೇರಿದಂತೆ ಶಾಸಕರಾದಿಯಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೂ ಹಲವು ಬಾರಿ ಮನವಿ ಮಾಡಿದರೂ ಕೂಡ ಸಂಬಳ ಸಿಗದ ಹಿನ್ನಲೆಯಲ್ಲಿ ಬುಧವಾರ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸಿ, ವೇತನ ಸಿಗುವವರೆಗೂ ಯಾವುದೇ ಕಾರಣಕ್ಕೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಆಗ್ರಹಿಸಿದ್ದಾರೆ.

ಗುತ್ತಿಗೆ ವೈದ್ಯರಿಗೆ ತಿಂಗಳಿಗೆ 60 ಸಾವಿರ ರೂ. ಸಂಬಳ ನಿಗದಿಪಡಿಸಲಾಗಿದೆ. ಆದರೆ 6-7 ತಿಂಗಳಿನಿಂದ ಸಂಬಳ ನೀಡಿಲ್ಲ. ಸಂಬಂಧಪಟ್ಟವರನ್ನು ಕೇಳಿದರೆ ಬಜೆಟ್ ಆದ ಬಳಿಕ ಕೊಡುತ್ತೇವೆ ಎಂದು ಸಬೂಬು ಹೇಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ನಾವು ಕೆಲಸ ಮಾಡುತ್ತಿದ್ದರೂ ಕೂಡ ನಮಗೆ ವೇತನ ಸಿಗುತ್ತಿಲ್ಲ. ಇನ್ನಿತರೆ ಸೌಲಭ್ಯಗಳು ಕೂಡ ಇಲ್ಲದೆ ವಂಚಿತರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾವು ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಮತ್ತು ಸರ್ಕಾರದ ಯೋಜನೆಗಳು ಮತ್ತು ಕಚೇರಿಯ ಕೆಲಸವನ್ನೂ ಕೂಡ ಮಾಡಬೇಕಾಗಿದೆ. ಇಷ್ಟೆಲ್ಲ ಕೆಲಸಗಳನ್ನೂ ಮಾಡುತ್ತಿದ್ದರೂ ವೇತನ ನೀಡಿದೆ ನಮ್ಮನ್ನು ಕಡೆಗಣಿಸಲಾಗುತ್ತಿದೆ. ನಾವು ಕಾಯಂ ವೈದ್ಯರಂತೆ ಕೆಲಸ ಮಾಡುತ್ತಿದ್ದೇವೆ. ಅವರಿಗೆ ಸರಿಯಾಗಿ ಸಂಬಳ ಆಗುತ್ತಿದೆ. ಆದರೆ ನಮಗೆ ಅರ್ಧ ವರ್ಷವಾದರೂ ಸಂಬಳವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರೋಗಿಗಳಿಗೆ ಸಂಕಷ್ಟ

ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ವೈದ್ಯರು ವೇತನ ಸಿಗದ ಹಿನ್ನಲೆಯಲ್ಲಿ ಕರ್ತವ್ಯಕ್ಕೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಕೇಂದ್ರಗಳು ಖಾಲಿ ಖಾಲಿ ಹೊಡೆಯುತ್ತಿದ್ದು, ರೋಗಿಗಳು ವೈದ್ಯರಿಲ್ಲದೆ ಇರುವುದರಿಂದ ಖಾಸಗಿ ವೈದ್ಯರ ಮೊರೆ ಹೋಗಬೇಕಾಗಿದೆ. ಇಲ್ಲಿ ಕೇವಲ ಡಿ ದರ್ಜೆ ನೌಕರರು ಮತ್ತು ದಾದಿಯರು ಮಾತ್ರ ಇದ್ದು, ಕೇವಲ ಪ್ರಥಮ ಚಿಕಿತ್ಸೆ, ಮಾತ್ರೆಗಳು ಮಾತ್ರ ದೊರೆಯುತ್ತಿವೆ.

ಸಂಸದರ ಭರವಸೆ ಕೂಡ ಈಡೇರಲಿಲ್ಲ

ಕಳೆದ ತಿಂಗಳು ಗುತ್ತಿಗೆ ವೈದ್ಯರು ಸಂಸದ ಶ್ರೇಯಸ್ ಪಟೇಲ್ ಅವರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಇನ್ನೊಂದು ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಸಂಸದರು ಭರವಸೆ ನೀಡಿದ್ದರು. ಆದ್ದರಿಂದ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಸಂಸದರು ಹೇಳಿದ ದಿನಾಂಕವೂ ಮುಗಿದರೂ ಕೂಡ ವೇತನ ಬಾರದ ಹಿನ್ನೆಲೆಯಲ್ಲಿ ಈಗ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಪಂಚ ಗ್ಯಾರಂಟಿಗಳಿಂದ ವೇತನ ಕಟ್?

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಘೋಷಣೆ ಮಾಡಿದಂತಹ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಈ ರೀತಿ ವೇತನದ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆಲ್ಲ ಪಂಚ ಗ್ಯಾರಂಟಿಗಳೇ ಕಾರಣ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net