

ಹುಬ್ಬಳ್ಳಿ: ಪ್ರಗತಿಯಲ್ಲಿರುವ ಅವಳಿ ನಗರದ ಎಲ್ಲ ವಾರ್ಡ್‌ಗಳಿಗೆ ನಿರಂತರ ನೀರು ಪೂರೈಸುವ ಯೋಜನೆಯ ಕಾಮಗಾರಿ ಸ್ಥಳವನ್ನು ಹು-ಧಾ ಮಹಾನಗರ ಪಾಲಿಕೆಯ ಸದಸ್ಯರು ಸೋಮವಾರ ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನೀರಸಾಗರ ಕೆರೆ ಜಾಕ್‌ವೆಲ್, ಕಣವಿ ಹೊನ್ನಪುರ ನೀರು ಶುದ್ಧೀಕರಣ ಘಟಕ, ಸವದತ್ತಿ ಜಾಕ್‌ವೆಲ್ ಹಾಗೂ ಅಮ್ಮಿನಭಾವಿಯಲ್ಲಿರುವ ಮಲಪ್ರಭಾ ನೀರು ಶುದ್ಧೀಕರಣ ಘಟಕಗಳಿಗೆ ಭೇಟಿ ನೀಡಿದರು. ಕಾಮಗಾರಿಯ ನೋಡಲ್ ಏಜೆನ್ಸಿ ಕೆಯುಐಡಿಎಫ್‌ಸಿ, ಗುತ್ತಿಗೆದಾರರಾದ ಎಲ್ ಆಂಡ್ ಟಿ ಕಂಪನಿ ಅಧಿಕಾರಿಗಳು ಕಾಮಗಾರಿಗಳ ವಿವರ ನೀಡಿದರು.
ಸವದತ್ತಿಯಲ್ಲಿ ಮಾಹಿತಿ ನೀಡಿದ ಅಧಿಕಾರಿಗಳು, ನಿರಂತರ ನೀರು ಪೂರೈಕೆ ಕಾಮಗಾರಿಯಡಿ ಮಲಪ್ರಭಾದಿಂದ ಹೆಚ್ಚು ವರಿ 43 ಎಂಎಲ್‌ಡಿ (ನಿತ್ಯ ಮಿಲಿಯನ್ ಲೀಟರ್) ನೀರು ಪಡೆಯಲಾಗುತ್ತಿದೆ. ಇದಕ್ಕಾಗಿ ಈಗಾಗಲೇ 17 ಕಿ.ಮೀ. ವ್ಯಾಪ್ತಿಯಲ್ಲಿ 10 ಕಿ.ಮೀ. ಪೈಪ್‌ಲೈನ್ ಅಳವಡಿಕೆ, ಅಮ್ಮಿನಭಾವಿಯಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆ ಕಾರ್ಯವು ಪ್ರಗತಿಯಲ್ಲಿದೆ. ಡಿಸೆಂಬರ್‌ನಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.
ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಅವಳಿ ನಗರದಲ್ಲಿ ಮನೆ ಮನೆಗೆ ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ತ್ವರಿತವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಉಪ ಗುತ್ತಿಗೆ ನೀಡಿ ಕಾಮಗಾರಿಗೆ ವೇಗ ನೀಡಲಾಗುತ್ತಿದೆ. ಸವದತ್ತಿ ಜಾಕ್‌ವೆಲ್ನಿಂದ ನೀರು ತರುವ ಕಾಮಗಾರಿ ಪ್ರಗತಿಯಲ್ಲಿದ್ದು, ಅವಳಿ ನಗರದಲ್ಲಿ ಪೈಪ್‌ಲೈನ್ ಜಾಲವು ವೇಗ ಪಡೆದರೆ, ಆದಷ್ಟು ಬೇಗ ನಿರಂತರ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದರು.
ಮೇಯರ್ ರಾಮಪ್ಪ ಬಡಿಗೇರ, ಉಪ ಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ವಿರೋಧ ಪಕ್ಷದ ನಾಯಕ ರಾಜಶೇಖರ ಕಮತಿ, ಸದಸ್ಯರಾದ ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಉಮೇಶಗೌಡ ಕೌಜಗೇರಿ, ಬೀರಪ್ಪ ಖಂಡೇಕರ, ಮಲ್ಲಿಕಾರ್ಜುನ ಗುಂಡೂರ ಇತರರು ಇದ್ದರು.