ಮೈಸೂರು ಜಿಲ್ಲೆಯಲ್ಲಿ ನಿರಂತರ ಜಲಧಾರೆ

mysore
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಪ್ರಸಕ್ತ ಹಂಗಾಮಿನಲ್ಲಿ ಜಿಲ್ಲಾದ್ಯಂತ ಉತ್ತಮವಾಗಿ ಜಲಧಾರೆಯಾಗಿದ್ದು, ರೈತರಲ್ಲಿ ಹರ್ಷೋಲ್ಲಾಸ ಮೂಡಿಸಿದೆ.

ಕಳೆದ ಜನವರಿಯಿಂದ ಜುಲೈ 16ರವರೆಗೆ ಜಿಲ್ಲೆಯಲ್ಲಿ ಶೇ.24ರಷ್ಟು ಹೆಚ್ಚು ವರ್ಷಧಾರೆಯಾಗಿದೆ. ಕಳೆದ ಬಾರಿ ಈ ಅವಧಿಯಲ್ಲಿ ಶೇ.12ರಷ್ಟು ಮಳೆ ಕೊರತೆ ಉಂಟಾಗಿತ್ತು. ಈ ಸಲ ಪರಿಸ್ಥಿತಿ ವಿಭಿನ್ನವಾಗಿದೆ. ಪೂರ್ವ ಮುಂಗಾರು, ಮುಂಗಾರು ಮಳೆ ಈ ಸಲ ನಿರಾಸೆಗೊಳಿಸಲಿಲ್ಲ.

ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆಯ ಪ್ರಮಾಣ 837 ಮಿ.ಮೀ. ಆಗಿದ್ದು, ಜನವರಿಯಿಂದ ಜುಲೈನ ಈವರೆಗಿನ ವಾಡಿಕೆ ಮಳೆ 364 ಮಿ.ಮೀ.ನಲ್ಲಿ ಈಗಾಗಲೇ 453 ಮಿ.ಮೀ. ಮಳೆ ದಾಖಲಾಗಿದೆ. ಇದು ಶುಭಸೂಚಕವಾಗಿದೆ. ಆದರೆ, 2023ರಲ್ಲಿ ಈ ಹೊತ್ತಿಗೆ ಶೇ.12ರಷ್ಟು ಮಳೆ ಕೊರತೆಯಿಂದ ಜಿಲ್ಲೆ ನಲುಗುತ್ತಿತ್ತು. ಕಳೆದ ವರ್ಷ ಈ ಅವಧಿಯಲ್ಲಿ 360 ಮಿ.ಮೀ. ಪೈಕಿ 318 ಮಿ.ಮೀಟರ್‌ನಷ್ಟು ಮಳೆ ದಾಖಲಾಗಿತ್ತು. ಬಳಿಕ ನಿರೀಕ್ಷಿತ ಮಟ್ಟದಲ್ಲೂ ಮಳೆಯಾಗಲಿಲ್ಲ. ಇದರಿಂದ ಇಡೀ ಜಿಲ್ಲೆ ಬರಗಾಲ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಆದರೆ, ಈ ಸಲ ಹೊಸ ನಿರೀಕ್ಷೆ, ಹೊಸ ಉತ್ಸಾಹವನ್ನೂ ಮಳೆರಾಯ ಮೂಡಿಸಿದ್ದಾನೆ.

ಕೆ.ಆರ್.ನಗರ ತಾಲೂಕು ಹೊರತುಪಡಿಸಿ ಉಳಿದ ತಾಲೂಕು ಪ್ರದೇಶದಲ್ಲಿ ಅಗತ್ಯಕ್ಕಿಂತ ಅಧಿಕ ಮಳೆ ಸುರಿದಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಳೆದ ಸಲ ಬರಗಾಲದಿಂದ ಕಂಗೆಟ್ಟಿದ್ದ ಕೃಷಿಕರು ಈ ಸಲ ಜಲವೃಷ್ಟಿಯಿಂದ ಸಂತಸಗೊಂಡಿದ್ದಾರೆ.

ಅಧಿಕ ಮಳೆ ಸುರಿದಿರುವುದು ದಾಖಲೆ:

ಸಾಲಿಗ್ರಾಮ ತಾಲೂಕಿನಲ್ಲಿ ಜಿಲ್ಲೆಯಲ್ಲೇ ಅಧಿಕ ಮಳೆ ಸುರಿದಿರುವುದು ದಾಖಲಾಗಿದೆ. ವಾಡಿಕೆಗಿಂತ ಇಲ್ಲಿ ಬರೋಬ್ಬರಿ ಶೇ.61ರಷ್ಟು ಮಳೆಯಾಗಿದೆ. ನಂತರ ಸ್ಥಾನವನ್ನು ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಪಿರಿಯಾಪಟ್ಟಣ ಪಡೆದಿದೆ. ಈ ತಾಲೂಕಿನಲ್ಲಿ ಶೇ.49ರಷ್ಟು ಹೆಚ್ಚುವರಿ ಮಳೆಯಾಗಿದೆ. ನಾಗರಹೊಳೆ ಅರಣ್ಯ ಪ್ರದೇಶವನ್ನು ಹೊಂದಿರುವ ಹುಣುಸೂರು, ಬಂಡೀಪುರ ಅರಣ್ಯ ಪ್ರದೇಶದ ಅಂಚಿನ ಎಚ್.ಡಿ.ಕೋಟೆ ತಾಲೂಕಿನಲ್ಲೂ ಶೇ.36ರಷ್ಟು ಅಧಿಕ ಮಳೆಯಾಗಿದೆ. ಅರಣ್ಯ ಪ್ರದೇಶದ ಹಸಿರಿನಿಂದ ನಳನಳಿಸಲು ನೆರವಾಗಿದೆ.

ನಂಜನಗೂಡು ತಾಲೂಕಿನಲ್ಲಿ ಶೇ.31, ಮೈಸೂರು ತಾಲೂಕಿನಲ್ಲಿ ಶೇ.12, ತಿ.ನರಸೀಪುರ ತಾಲೂಕಿನಲ್ಲಿ ಶೇ.18ರಷ್ಟು, ಸರಗೂರು ತಾಲೂಕಿನಲ್ಲಿ ಶೇ.12ರಷ್ಟು ಹೆಚ್ಚುವರಿ ವರ್ಷಧಾರೆಯಾಗಿದೆ. ಆದರೆ, ಎಲ್ಲ ಭಾಗದಲ್ಲೂ ಉತ್ತಮ ಮಳೆಯಾಗಿದ್ದರೆ ಕೆ.ಆರ್. ನಗರ ತಾಲೂಕಿನಲ್ಲಿ ಮಾತ್ರ ಮಳೆ ಕೊರತೆ ಎದುರಾಗಿದೆ. ಈವರೆಗಿನ ವಾಡಿಕೆ ಮಳೆ 301 ಮಿ.ಮೀ. ಪೈಕಿ 292 ಮಿ.ಮೀಟರ್‌ನಷ್ಟು ಮಳೆ ದಾಖಲಾಗಿದೆ.

ಪ್ರಸಕ್ತ ಸಾಲಿನ ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್‌ನಲ್ಲಿ ವಾಡಿಕೆಯಷ್ಟೂ ಮಳೆಯಾಗಿರಲಿಲ್ಲ. ಶೇ.90ರಷ್ಟು ಮಳೆ ಕೊರತೆ ದಾಖಲಾಗಿತ್ತು. ಉರಿಬಿಸಿಲಿನಿಂದ ಜಿಲ್ಲೆಯ ಬಸವಳಿದುಹೋಗಿತ್ತು. ಆದರೆ, ಮೇ, ಜೂನ್, ಜುಲೈನಲ್ಲಿ ಉತ್ತಮ ವರ್ಷಧಾರೆಯಾಗಿದ್ದು, ಮೇ ತಿಂಗಳಲ್ಲೇ ಶೇ.100ರಷ್ಟು ಅಧಿಕ ಮಳೆಯಾಗಿದ್ದರಿಂದ ಭರಿದಾಗಿದ್ದ ಕೆರೆಕಟ್ಟೆಗಳಿಗೆ ಜೀವಕಳೆ ಬರಲು ಶುರುವಾಯಿತು.


ಮುಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ ಶೇ.50ರಷ್ಟು ಬಿತ್ತನೆ:

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ ಈಗಾಗಲೇ ಶೇ.50ರಷ್ಟು ಬಿತ್ತನೆಯಾಗಿದೆ. ಈಗ ಸುರಿಯುತ್ತಿರುವ ಮಳೆ ಕೃಷಿ ಬೆಳೆಗೆ ಜೀವಕಳೆ ತಂದುಕೊಟ್ಟಿದೆ. ಮಳೆ ಆಶ್ರಿತ ಪ್ರದೇಶದಲ್ಲೇ ಶೇ.68ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಜಿಲ್ಲೆಯ 3,90,267 ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ 1,95,277 ಹೆಕ್ಟೇರ್ ಕೃಷಿ ಭೂಮಿಯಲ್ಲಿ ರೈತರು ಬಿತ್ತನೆಯ ಕೆಲಸವನ್ನು ಮುಗಿಸಿದ್ದಾರೆ. 2023ರಲ್ಲಿ ಈವರೆಗೆ 1,91,082 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಈ ಸಲ ಹದವಾಗಿ ಸುರಿಯುತ್ತಿರುವ ಜಲಧಾರೆ ಬಿಡುವು ಕೊಟ್ಟ ಬಳಿಕವೇ ಬಾಕಿ ಉಳಿದಿರುವ 1.94 ಲಕ್ಷ ಹೆಕ್ಟೇರ್‌ದಲ್ಲಿ ಬಿತ್ತನೆ ಮಾಡಲು ರೈತರು ಮುಂದಾಗಲಿದ್ದಾರೆ.

ಸರಗೂರು ತಾಲೂಕಿನಲ್ಲಿ ಅಧಿಕ ಬಿತ್ತನೆಯಾಗಿದೆ. ಇಲ್ಲಿ ಶೇ.85ರಷ್ಟು ಈಗಾಗಲೇ ಬಿತ್ತನೆ ಕೆಲಸ ಮುಗಿದಿದೆ. ಉಳಿದಂತೆ ಎಚ್.ಡಿ.ಕೋಟೆ(ಶೇ.86), ಹುಣಸೂರು (ಶೇ.52), ಕೆ.ಆರ್. ನಗರ(ಶೇ.36), ಸಾಲಿಗ್ರಾಮ(ಶೇ.33), ಮೈಸೂರು (ಶೇ.39), ನಂಜನಗೂಡು (ಶೇ.49), ಪಿರಿಯಾಪಟ್ಟಣ(ಶೇ.55) ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದ್ದು, ತಿ.ನರಸೀಪುರ ತಾಲೂಕಿನಲ್ಲಿ ಕಡಿಮೆ ಅಂದರೆ ಈ ವರೆಗೆ ಶೇ. 13ರಷ್ಟು ಮಾತ್ರ ಬಿತ್ತನೆ ಆಗಿದೆ.

ಅಧಿಕ ಮಳೆಯಿಂದ ಜಿಲ್ಲೆ ಕೆಲ ಕಡೆ ಕೃಷಿ ಬೆಳೆ ಹಾನಿಯಾಗಿದೆ. ಈ ಪೈಕಿ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವ ತಂಬಾಕು ಬೆಳೆಗೆ ಹೆಚ್ಚಿನ ಹಾನಿಯಾಗಿದೆ. ಹುಣಸೂರು ತಾಲೂಕಿನಲ್ಲಿ 65, ಪಿರಿಯಾಪಟ್ಟಣ ತಾಲೂಕಿನಲ್ಲಿ 145 ಸೇರಿದಂತೆ 210 ಎಕರೆ ಪ್ರದೇಶ ಹೊಗೆಸೊಪ್ಪು ಹಾಳಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಜೋಳ ಬೆಳೆಗೂ ಧಕ್ಕೆಯಾಗಿದ್ದು, ಹುಣಸೂರಿನಲ್ಲಿ 10, ಪಿರಿಯಾಪಟ್ಟಣದಲ್ಲಿ 10, ತಿ.ನರಸೀಪುರ ತಾಲೂಕಿನಲ್ಲಿ 25 ಎಕರೆ ಸೇರಿದಂತೆ ಜಿಲ್ಲಾದ್ಯಂತ 45 ಎಕರೆ ಪ್ರದೇಶದ ಬೆಳೆದಿದ್ದ ಜೋಳ ಬೆಳೆ ಮಳೆಯಿಂದ ನಷ್ಟಕ್ಕೆ ಒಳಗಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆಯ 255 ಎಕರೆ ಪ್ರದೇಶದ ಬೆಳೆ ಮಳೆಗೆ ಆಹುತಿಯಾಗಿದೆ. ನಷ್ಟಕ್ಕೆ ಒಳಗಾದ ಕೃಷಿಕರಿಗೆ ಪರಿಹಾರ ವಿತರಣೆಗೆ ಕೃಷಿ ಇಲಾಖೆ ಕ್ರಮ ತೆಗೆದುಕೊಂಡಿದೆ.

3 ಡ್ಯಾಂಗಳಿಗೆ ಒಳ ಹರಿವು ಏರಿಕೆ

ಜಿಲ್ಲೆಯ ಮೂರು ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕೇರಳದ ವಯನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಎಚ್.ಡಿ.ಕೋಟೆಯ ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಒಳಹರಿವಿನ ಪ್ರಮಾಣದ 30 ಸಾವಿರ ಕ್ಯೂಸೆಕ್ ಇದೆ. ಸುರಕ್ಷತಾ ದೃಷ್ಟಿಯಿಂದ ಕಪಿಲಾ ನದಿಗೆ 35 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಅಪಾಯಮಟ್ಟದಲ್ಲಿ ನೀರು ಹರಿಯುತ್ತಿದೆ.

ನಗು ಜಲಾಶಯ ಭರ್ತಿಗೆ ಕೇವಲ 2 ಅಡಿ ಬಾಕಿ ಇದೆ. 4.810 ಟಿಎಂಸಿ ಸಾಮರ್ಥ್ಯ ಇರುವ ಈ ಚಿಕ್ಕ ಡ್ಯಾಂನಲ್ಲಿ ಈಗಾಗಲೇ 4.272 ಟಿಎಂಸಿ ಸಂಗ್ರಹವಾಗಿದೆ. 1.55 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ತಾರಕ ಡ್ಯಾಂ ಗೂ ಹೆಚ್ಚಿನ ಪ್ರಮಾನದಲ್ಲಿ ನೀರು ಹರಿದು ಬರುತ್ತಿದೆ.

ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದೆ. ಮುಂದಿನ ದಿನಗಳಲ್ಲೂ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಇದು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪೂರಕವಾಗಿದೆ. ಬಿತ್ತನೆ ಕೆಲಸ ಪ್ರಗತಿಯಲ್ಲಿದೆ. ಪ್ರವಾಹದಿಂದ ಕೆಲ ಕಡೆ ಕೃಷಿ ಬೆಳೆ ಹಾನಿಯಾಗಿದೆ.ಚಂದ್ರಶೇಖರ್ಜಂಟಿ ಕೃಷಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net