

ಕಡೂರು: ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸಮಯ ಪ್ರಜ್ಞೆ ಮುಖ್ಯ. ನಿರಂತರ ಅಧ್ಯಯನದಿಂದ ಗುರಿ ತಲುಪಲು ಸಾಧ್ಯ ಎಂದು ಚಕ್ರವರ್ತಿ ಪಿಯು ಕಾಲೇಜಿನ ಪ್ರಾಚಾರ್ಯ ರುದ್ರೇಶ್ ಬೆಟ್ಟದಹಳ್ಳಿ ಹೇಳಿದರು.
ಮಲ್ಲೇಶ್ವರ ಸಮೀಪದ ಚಕ್ರವರ್ತಿ ಪಿಯು ಕಾಲೇಜಿನಲ್ಲಿ ಸಮನ್ವಯ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದ ಅಂಗವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಜೀವನದಲ್ಲಿ ಗುರಿ ಜತೆಗೆ ಗುರುಭಕ್ತಿ, ಶ್ರದ್ಧೆ , ಶಿಸ್ತಿನ ಗುಣಗಳನ್ನು ರೂಢಿಸಿಕೊಳ್ಳಬೇಕು. ಕಾಲೇಜಿನ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಉನ್ನತ ಸಾಧನೆ ಮಾಡಬೇಕು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುವುದು. ವಿದ್ಯಾರ್ಥಿಗಳಿಗೆ ಓದಿನ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುವುದು ಎಂದರು.
ಸಮನ್ವಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ಪಿ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪದವಿ ಪೂರ್ವ ಶಿಕ್ಷಣದ ವಿದ್ಯಾರ್ಥಿಗಳಿಗೆ ಭವಿಷ್ಯದ ಶಿಕ್ಷಣ ಬಹುಮುಖ್ಯವಾಗಲಿದೆ. ಕಾಲೇಜಿನ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ದೊರೆತ ಸಮಯದಲ್ಲಿ ಓದಿನ ಕಡೆ ಹೆಚ್ಚು ಗಮನಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಸಂಸ್ಥೆ ಸದಸ್ಯರಾದ ಧನಂಜಯ್, ನಟರಾಜ್, ನಾಗೇಂದ್ರ, ಉಪನ್ಯಾಸಕರಾದ ಪ್ರವೀಣ್, ಎಚ್.ಸಿ.ಉಷಾದೇವಿ, ಪ್ರವೀಣ್, ಪಲ್ಲವಿ ಇದ್ದರು.