ಪ್ರತ್ಯೇಕ ಜಿಲ್ಲೆಯಾಗುವವರೆಗೂ ನಿರಂತರ ಹೋರಾಟ

16 SRS 6 NEW
Published on

ಶಿರಸಿ: ಘಟ್ಟದ ಮೇಲಿನ ಪ್ರತಿ ತಾಲೂಕಿನಲ್ಲಿ ಎಲ್ಲರನ್ನೂ ಒಳಗೊಂಡು ಕದಂಬ ಕನ್ನಡ ಜಿಲ್ಲೆಯ ಸಮಿತಿ ರಚನೆಯಾಗಬೇಕು. ಈ ಹೋರಾಟ ಜಿಲ್ಲೆಯಾಗುವವರೆಗೂ ನಿರಂತರವಾಗಿರಬೇಕು. ಈ ಹೋರಾಟವನ್ನು ಮುಂದುವರೆಸುವವರು ಕದಂಬ ಕನ್ನಡ ಸೇನಾನಿಗಳೇ ಆಗಿರುತ್ತಾರೆಯೇ ಹೊರತು ನಾಯಕರಲ್ಲ. ಇಲ್ಲಿ ನಾಯಕತ್ವ ಕೇವಲ ಸಾಂಕೇತಿಕ. ಜಿಲ್ಲೆಯನ್ನಾಗಿಸುವ ಧ್ಯೇಯ ಮಾತ್ರ ನಿರಂತರವಾಗಿರುತ್ತದೆ ಎಂದು ಕದಂಬ ಕನ್ನಡ ಜಿಲ್ಲೆಗಾಗಿ ಶನಿವಾರ ಶಿರಸಿಯಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಇಲ್ಲಿಯ ನೆಮ್ಮದಿ ರಂಗಧಾಮದಲ್ಲಿ ಆಯೋಜಿಸಿದ್ದ ಕದಂಬ ಕನ್ನಡ ಜಿಲ್ಲೆಗಾಗಿ ಜನಜಾಗೃತಿ ಸಭೆಯಲ್ಲಿ ಘಟ್ಟದ ಮೇಲಿನ ತಾಲೂಕುಗಳ ವಿವಿಧ ಸಂಘಟನೆಗಳ ಪ್ರಮುಖರು ಭಾಗಿಯಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್​ನ ಎಂ.ಎಂ. ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 24 ವರ್ಷದ ಹಿಂದೆಯೇ ಶಿರಸಿ ಪ್ರತ್ಯೇಕ ಜಿಲ್ಲೆಯ ಹೋರಾಟ ಪ್ರಾರಂಭವಾಗಿತ್ತು. ನಂತರದಲ್ಲಿ ಉಪೇಂದ್ರ ಪೈ ಅವರ ನೇತೃತ್ವದಲ್ಲಿ ಪ್ರತ್ಯೇಕ ಜಿಲ್ಲಾ ಹೋರಾಟ ಮತ್ತೇ ಬಿರುಸಾಯಿತು. ಅಂತಿಮ ಹಂತದಲ್ಲಿ ಆ ಪ್ರಯತ್ನ ಕೈಗೂಡಲಿಲ್ಲ. ಆದರೆ, ಇದೀಗ ಮತ್ತೆ ಪ್ರತ್ಯೇಕ ಜಿಲ್ಲಾ ಹೋರಾಟ ಕೈಗೆತ್ತಿಕೊಳ್ಳಲಾಗಿದೆ. ಎಲ್ಲರ ಸಹಕಾರದಿಂದ ಜಿಲ್ಲೆ ರಚನೆ ಸಾಧ್ಯ. ಜನಸಾಮಾನ್ಯರ ಮನೆಬಾಗಿಲಿಗೆ ಆಡಳಿತ ಮತ್ತು ಅನುಕೂಲತೆ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆಯ ರಚನೆ ಆಗಲೇಬೇಕು ಎಂದರು.

ಕದಂಬ ಕನ್ನಡ ಜಿಲ್ಲಾ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್​ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಜಿಪಂ ಮಾಜಿ ಸದಸ್ಯ ರಾಘವೇಂದ್ರ ಹಾಸಣಗಿ, ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ಶೆಟ್ಟಿ ಮಾತನಾಡಿದರು.

ಕದಂಬ ಕನ್ನಡ ಜಿಲ್ಲೆಗಾಗಿ ನಡೆದ ಜನಜಾಗೃತಿ ಸಭೆಯಲ್ಲಿ ವಿವಿಧ ತಾಲೂಕುಗಳ ಪ್ರಮುಖ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಭಾಗಿಯಾಗಿದ್ದರು.

ಉಪೇಂದ್ರ ಪೈ ಅವರು ನಮ್ಮೊಡನೆ ಬಂದಲ್ಲಿ, ಕದಂಬ ಕನ್ನಡ ಜಿಲ್ಲೆಯ ಗೌರವಾಧ್ಯಕ್ಷರನ್ನಾಗಿಸಿ, ಅವರ ಮಾರ್ಗದರ್ಶನದಲ್ಲಿಯೇ ಹೋರಾಟ ಮಾಡುತ್ತೇವೆ. ನಾಯಕತ್ವ ಮುಖ್ಯವಲ್ಲ. ಬದಲಾಗಿ ಕದಂಬ ಕನ್ನಡ ಜಿಲ್ಲೆಯಾಗುವುದೇ ನಮ್ಮ ಧ್ಯೇಯ. | ವಿ.ಎಂ. ಭಟ್ಟ, ನಿವೃತ್ತ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net