ನನಸಾಗದ ಮಾಯಕೊಂಡ ತಾಲೂಕು ಕೇಂದ್ರದ ಕನಸು

8myk1
Published on

ಕೃಷ್ಣಮೂರ್ತಿ ಪಿ.ಎಚ್.ಮಾಯಕೊಂಡ

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೂರಾರು ವೀರರನ್ನು ನೀಡಿದ ಹೆಗ್ಗಳಿಕೆ ಮಾಯಕೊಂಡದ್ದು. ಇದು ದಾವಣಗೆರೆ ತಾಲೂಕಿನ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನವೂ ಹೌದು. ಮಾಯಕೊಂಡವನ್ನು ತಾಲೂಕು ಕೇಂದ್ರವಾಗಿಸಬೇಕೆಂದು 45 ವರ್ಷಗಳಿಂದ ನಿರಂತರವಾಗಿ ಹೋರಾಡುತ್ತಿದ್ದರೂ ಫಲ ಸಿಕ್ಕಿಲ್ಲ.

ಗ್ರಾಮ ಹೋಬಳಿ ಕೇಂದ್ರವಾಗಿದ್ದು, ದಾವಣಗೆರೆ ಜಿಲ್ಲಾ ಕೇಂದ್ರದಿಂದ 32 ಕಿ.ಮೀ. ದೂರದಲ್ಲಿದೆ. 15 ಸದಸ್ಯರನ್ನೊಳಗೊಂಡ ಗ್ರೇಡ್-1 ಗ್ರಾಮ ಪಂಚಾಯಿತಿ ಹೊಂದಿದೆ. 1978ರಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರವಾಯಿತು. ಆಡಳಿತಾತ್ಮಕ ಹಿತದೃಷ್ಟಿಯಿಂದ ತಾಲೂಕು ಕೇಂದ್ರವಾಗಿಸಲು ಗ್ರಾಮದ ಹಿರಿಯರು, ಸುತ್ತಮುತ್ತಲಿನ ಹಳ್ಳಿಗಳ ಮುಖಂಡರು ಹೋರಾಟ ಆರಂಭಿಸಿದರು. ನಿರಂತರ ಹೋರಾಟಕ್ಕೆ ಯಾವ ಮುಖ್ಯಮಂತ್ರಿ ಸ್ಪಂದನೆಯೂ ದೊರೆಯಲಿಲ್ಲ. ಆಶ್ಚರ್ಯವೆಂದರೆ, 40 ವರ್ಷಗಳ ಹಿಂದೆ ಪುರಸಭೆ ಹೊಂದಿದ್ದ ಮಾಯಕೊಂಡ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಇಳಿಯಿತು.

ದಾವಣಗೆರೆ ತಾಲೂಕು ಕಚೇರಿಗಳಿಗೆ ಹೋಬಳಿಯ ಗ್ರಾಮಗಳ ಜನರ ಅಲೆದಾಟ ತಪ್ಪಿಸಲು ತಾಲೂಕು ಕೇಂದ್ರವಾಗಿಸಲು ಹೋರಾಟ ನಡೆಸುತ್ತಾ ಬಂದಿದ್ದೇವೆ. ಕ್ಷೇತ್ರದ ಯಾವ ಶಾಸಕರೂ ಸರ್ಕಾರಕ್ಕೆ ಒತ್ತಡ ಹಾಕಲು ಮುಂದಾಗಿಲ್ಲ ಎಂದು ತಾಲೂಕು ಹೋರಾಟ ಸಮಿತಿ ಬೇಸರ ವ್ಯಕ್ತಪಡಿಸಿದೆ.

ಹೋರಾಟ ಸಮಿತಿ ರಚಿಸಿಕೊಂಡು ಊರೂರು ಸುತ್ತಿ ಜನರನ್ನು ಸಂಘಟಿಸಿದ ಮಾಯಕೊಂಡ ಮಾಜಿ ಪುರಸಭಾ ಅಧ್ಯಕ್ಷ ದಿ. ಎಸ್. ನೀಲಪ್ಪ, ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ದಿ. ಎಸ್. ಸಿದ್ದಲಿಂಗಪ್ಪ ಹಾಗೂ 80ರ ಇಳಿ ವಯಸ್ಸಿನಲ್ಲೂ 20 ವರ್ಷದ ಯುವಕನಂತೆ ಸದಾ ಲವಲವಿಕೆಯಿಂದ ಸೈಕಲ್​ನಲ್ಲಿ ತಿರುಗಾಡಿಕೊಂಡು ಹೋರಾಟದಲ್ಲಿ ಸಕ್ರಿಯರಾಗಿದ್ದ ದಿ. ಎಂ.ಎಸ್.ಕೆ. ಶಾಸ್ತ್ರಿ ಅವರ ಕನಸು ಇಂದಿಗೂ ನನಸಾಗಿಲ್ಲ.

ಇಲ್ಲಿವೆ ಮೂಲ ಸೌಕರ್ಯಗಳು: ಮಾಯಕೊಂಡ ಗ್ರಾಮವು ತಾಲೂಕು ರಚನೆಗೆ ಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಬೆಂಗಳೂರು-ಮುಂಬೈ ಮೂಲಕ ದೆಹಲಿ ಸಂರ್ಪಸುವ ರೈಲ್ವೆ ಮಾರ್ಗ ಗ್ರಾಮದಲ್ಲಿ ಹಾದು ಹೋಗಿದೆ. ಮಂಡ್ಯ-ಹಡಗಲಿ (ರಾಜ್ಯ ಹೆದ್ದಾರಿ 47) ಇಲ್ಲಿಂದ ಹಾದು ಹೋಗಿದೆ. ಪದವಿ, ಐಟಿಐ, ಕೆಪಿಎಸ್ ಶಾಲಾ-ಕಾಲೇಜುಗಳು, ಖಜಾನೆ, ನಾಡಕಚೇರಿ, ಎಪಿಎಂಸಿ ಪ್ರಾಂಗಣ, ಕೃಷಿ ಇಲಾಖೆ, ಪಶು ವೈದ್ಯಕೀಯ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಬ್ಯಾಂಕ್, ಗೋದಾಮುಗಳು ಸೇರಿದಂತೆ ಹಲವು ಸವಲತ್ತುಗಳು ಇಲ್ಲಿ ಲಭ್ಯವಿವೆ.

ತಾಲೂಕು ಕೇಂದ್ರವಾಗಿಸಲು ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಎಲ್ಲರೂ ಪೂರಕವಾಗಿ ಸ್ಪಂದಿಸಿದ್ದಾರೆ. ಮಳೆಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಈ ಕುರಿತು ಘೊಷಣೆ ಮಾಡುವ ವಿಶ್ವಾಸವಿದೆ. | ಕೆ.ಎಸ್. ಬಸವಂತಪ್ಪ, ಶಾಸಕ, ಮಾಯಕೊಂಡ.

ನ್ಯಾಮತಿಯು ಹೊನ್ನಾಳಿಯಿಂದ 13 ಕಿ.ಮೀ. ದೂರದಲ್ಲಿದ್ದರೂ ಅಂದಿನ ಸರ್ಕಾರ ಯಾವುದೇ ಮಾಹಿತಿ ಕೇಳದೆ ತಾಲೂಕು ಕೇಂದ್ರವಾಗಿ ಘೊಷಿಸಿತು. ಆದರೆ ದಾವಣಗೆರೆಯಿಂದ 32 ಕಿ.ಮೀ. ದೂರದಲ್ಲಿರುವ ಮಾಯಕೊಂಡವನ್ನು ತಾಲೂಕು ಕೇಂದ್ರವಾಗಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಮಳೆಗಾಲದ ಅಧಿವೇಶನದಲ್ಲಿ ತಾಲೂಕು ಘೊಷಣೆ ಮಾಡದಿದ್ದರೆ ಹೈಕೋರ್ಟ್ ಮೊರೆ ಹೋಗಿ ಕಾನೂನಾತ್ಮಕವಾಗಿ ಸರ್ಕಾರದ ಗಮನ ಸೆಳೆಯಲಿದ್ದೇವೆ. | ಅಶೋಕ್ ಗೌಡ್ರು, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ.

ಶಾಸಕನಾಗಿ ಆಯ್ಕೆಯಾದಾಗ ಮಾಡಿದ ಮೊದಲ ಕೆಲಸವೆಂದರೆ ತಾಲೂಕು ಹೋರಾಟ ಸಮಿತಿಯವರನ್ನು ಬೆಂಗಳೂರಿಗೆ ಕರೆದೊಯ್ದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರ್ಚಚಿಸಿದ್ದು. ನಂತರ ಈ ವಿಷಯದ ಕಡತ ದಾವಣಗೆರೆ ಜಿಲ್ಲಾಡಳಿತಕ್ಕೆ ಬಂದು ಜನಾಭಿಪ್ರಾಯ ಸಹಿತ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಮುಂದಿನ ಬೆಳವಣಿಗೆ ನಡೆಯುವಷ್ಟರಲ್ಲಿ ನನ್ನ ಅಧಿಕಾರಾವಧಿ ಮುಗಿದಿತ್ತು. | ಪೊ. ಎನ್. ಲಿಂಗಣ್ಣ, ಮಾಜಿ ಶಾಸಕ.

ಮಾಯಕೊಂಡ ದೊಡ್ಡ ಹೋಬಳಿ ಕೇಂದ್ರವಾಗಿದ್ದು, ಸುಮಾರು 65 ಹಳ್ಳಿಗಳನ್ನೊಳಗೊಂಡಿದೆ. ಇದರ ಜೊತೆಗೆ ಆನಗೋಡು, ಲೋಕಿಕೆರೆ ಹೋಬಳಿಗಳ ಕೆಲವು ಗ್ರಾಮಗಳನ್ನು ಸೇರ್ಪಡೆ ಮಾಡಿಕೊಂಡು ಮಾಯಕೊಂಡವನ್ನು ತಾಲೂಕು ಕೇಂದ್ರವಾಗಿಸಿದರೆ ಆಡಳಿತದ ಅನುಕೂಲಕ್ಕೆ ಪೂರಕವಾಗುತ್ತದೆ. | ಸಾಕಮ್ಮ ಲಿಂಗರಾಜ್, ಗ್ರಾ.ಪಂ. ಅಧ್ಯಕ್ಷೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net