ನಿತ್ಯವೂ ಮಳೆ; ಅಡಕೆ ಬೆಳೆಗೆ ಕೊಳೆ

Adake 2 (2)
Published on

ಬೆಳೆದ ಫಸಲಿಗೆ ಪ್ರಾಣಿ-ಪಕ್ಷಿಗಳ ಕಾಟ

ಭತ್ತ ಕಟಾವು ಮಾಡಲಾಗದೆ ಕೃಷಿಕರ ಪರದಾಟ

ಪ್ರಶಾಂತ ಭಾಗ್ವತ ಉಡುಪಿ

ಪ್ರತಿವರ್ಷವೂ ಸಹ ಹವಾಮಾನ ವೈಪರೀತ್ಯವು ರೈತ ಸಮುದಾಯವನ್ನು ಹೈರಾಣಾಗಿಸುತ್ತಿವೆ. ಮಳೆ ಹೆಚ್ಚಾದರೂ, ಕಡಿಮೆಯಾದರೂ ಅವರಿಗೆ ನಷ್ಟವೆನ್ನುವುದು ಕಟ್ಟಿಟ್ಟ ಬುತ್ತಿ. ಅಂತಹ ಕಷ್ಟದಾಯಕ ಬದುಕು ಈ ವರ್ಷವೂ ಮುಂದುವರಿದಿದ್ದು, ಕೃಷಿಕರು ಅಪಾರ ಹಾನಿ ಅನುಭವಿಸಿದ್ದಾರೆ.

ಕಾಲಮಾನದಂತೆ ಸೆಪ್ಟೆಂಬರ್​ನಲ್ಲಿ ಮಳೆಗಾಲ ಮುಗಿಯಬೇಕಿದ್ದರೂ ಅಕ್ಟೋಬರ್​ ತಿಂಗಳ ಅಂತ್ಯದಲ್ಲೂ ಸಹ ವರುಣಾಘಾತ ಮುಂದುವರಿದಿದೆ. ಮಳೆಯ ಕಾರಣದಿಂದ 3 ಬಾರಿ ಬೋರ್ಡೋ ದ್ರಾವಣ ಸಿಂಪಡಿಸಿದರೂ ಸಹ ಹಣ್ಣಾದ ಅಡಕೆಗೆ ಕೊಳೆ ರೋಗ ಕಾಡುತ್ತಿದೆ.

ಬೆಳೆ ರಕ್ಷಣೆಯದ್ದೇ ಸವಾಲು

Adake 2 (1)
1111
ಪ್ರಸ್ತುತ ವರ್ಷದಲ್ಲಿ ಮೇ ತಿಂಗಳಲ್ಲೇ ಮಳೆ ಆರಂಭಗೊಂಡಿದ್ದು, ಈಗಲೂ ಮುಂದುವರಿದಿದೆ. ನಿರಂತರ ವರ್ಷಧಾರೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಸಾವಿರುರು ಕುಟುಂಬಗಳು ಜೀವನಾಧಾರಕ್ಕಾಗಿ ಅಡಕೆ ಬೆಳೆಯನ್ನೇ ನಂಬಿಕೊಂಡಿದ್ದು ಈ ಬಾರಿ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಕೊಳೆ ರೋಗಕ್ಕೆ ತುತ್ತಾಗಿದ್ದರೂ ಅಲ್ಪ ಸ್ವಲ್ಪ ಉಳಿದ ಬೆಳೆ ರಕ್ಷಣೆ ಮಾಡಿಕೊಳ್ಳಲು ಸಹ ಮಳೆ ಪ್ರತಿದಿನವೂ ಸವಾಲು ನೀಡುತ್ತಿದೆ.

ಪ್ರಾಣಿ-ಪಕ್ಷಿಗಳ ಕಾಟ

2222
ನಿತ್ಯವೂ ಮಳೆ ಬರುತ್ತಿರುವುದರಿಂದ ಹಣ್ಣಾದ ಅಡಕೆ ಗೊನೆಯನ್ನು ಕಟಾವು ಮಾಡಿ ಒಣಗಿಸಲು ಬೆಳೆಗಾರರಿಗೆ ಸಾಧ್ಯವಾಗುತ್ತಿಲ್ಲ. ಕೆಲವರು ಸೋಲಾರ್​, ಪ್ಲಾಸ್ಟಿಕ್​ ಅಳವಡಿಸಿದ್ದರೂ ಸಹ ಅದು ತುಂಬಿ ಹೋಗಿದೆ. ಹಣ್ಣಾದ ಅಡಕೆಯನ್ನು ಗಿಳಿ, ಬಾವಲಿ, ಮಂಗಗಳು ತಿನ್ನುತ್ತಿದ್ದು, ತೋಟದ ತುಂಬೆಲ್ಲ ಅಡಕೆಗಳು ಬಿದ್ದಿವೆ. ಅತಿಯಾದ ಮಳೆಯಿಂದ ಅಡಕೆ ಮರಗಳು ಚಿರುಟಿದಂತಾಗಿದ್ದು ಫಸಲೂ ಸಹ ನಿರೀಕ್ಷೆಯಷ್ಟು ಬಂದಿಲ್ಲ ಎನ್ನುತ್ತಾರೆ ಬೆಳೆಗಾರರು.

ಜಿಲ್ಲೆಯಲ್ಲಿ 30,582 ಹೆಕ್ಟೇರ್​ ಬಿತ್ತನೆ

Adake 3
ಜಿಲ್ಲೆಯಲ್ಲಿ ಈ ವರ್ಷ 35 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, 30,582 ಹೆಕ್ಟೇರ್​ನಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ದೀಪಾವಳಿಗೂ ಮೊದಲು ಶೇ.5ರಿಂದ 10 ರೈತರು ಕಟಾವು ಮಾಡಿದ್ದು ನಿತ್ಯ ಮಳೆಯಿಂದಾಗಿ ಭತ್ತ ಹಾಗೂ ಹುಲ್ಲು ಒಣಗಿಸಲಾಗದೆ ತೊಂದರೆ ಪಡುತ್ತಿದ್ದಾರೆ. ದೀಪಾವಳಿ ಬಳಿಕ ಕಟಾವು ಮಾಡಲು ನಿರ್ಧರಿಸಿದ್ದ ರೈತರಿಗೆ ಮಳೆ ಬೆಂಬಿಡದೆ ಕಾಡತೊಡಗಿದೆ. ನಾಲ್ಕೈದು ದಿನದಿಂದ ವಿಪರೀತ ಗಾಳಿಯೂ ಬೀಸುತ್ತಿದ್ದು, ಒಣಗಿ ನಿಂತಿದ್ದ ಭತ್ತದ ಪೈರು ಭೂಮಿಗೆ ವಾಲಿದೆ. ಭತ್ತಗಳು ಉದುರತೊಡಗಿವೆ. ಕಟಾವು ಮಾಡಲೂ ಸಹ ತೊಡಕುಂಟಾಗಲಿದ್ದು, ಪ್ರಾಣಿಗಳ ಉಪಟಳವೂ ಹೆಚ್ಚಿದೆ ಎನ್ನುತ್ತಾರೆ ಭತ್ತ ಬೆಳೆಗಾರರು.

ಶೇ.50ಕ್ಕೂ ಅಧಿಕ ಹೆಕ್ಟೇರ್​ ಅಡಕೆ ಹಾನಿ

ತಾಲೂಕು         ಒಟ್ಟು ಅಡಕೆ ಕ್ಷೇತ್ರ (ಹೆ)         ಶೇ.33ಕ್ಕಿಂತ ಹೆಚ್ಚು ಹಾನಿ (ಹೆ)         ರೈತರ ಸಂಖ್ಯೆ ಉಡುಪಿ           351                                       140                                            210 ಕಾಪು              108                                      43                                               65 ಬ್ರಹ್ಮಾವರ       1,410                                   564                                            846 ಬೈಂದೂರು      2,991                                  1,794                                          3,240 ಕುಂದಾಪುರ     9,022                                  4,511                                          5,470 ಕಾರ್ಕಳ          7,013                                   3,850                                         5,750 ಹೆಬ್ರಿ               3,374                                  1,855                                          2,780 ಒಟ್ಟು              24,269                               12,577                                        18,361

ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಕಾಲಮಾನಕ್ಕೆ ತಕ್ಕಂತೆ ಯಾವುದೂ ನಡೆಯುತ್ತಿಲ್ಲ. ಪ್ರಕೃತಿ ವಿಕೋಪದಿಂದಾಗಿ ಇನ್ನೂ ಮಳೆ ಬರುತ್ತಲೇ ಇದೆ. ಕೃಷಿಯಲ್ಲಿ ಖುಷಿಯಿದ್ದರೂ ಸವಾಲು ಮೆಟ್ಟಿನಿಂತು ಬೆಳೆಗಾಗಿ ಹೋರಾಡುವ ಅನಿವಾರ್ಯತೆ ಕೃಷಿಕರಿಗೆ ತಪ್ಪದು. ಏನೇ ಆದರೂ ರೈತರೇ ಅನ್ನ ಬೆಳೆಯಬೇಕೇ ವಿನಹ ಕಂಪ್ಯೂಟರ್​ನಲ್ಲಿ ಸೃಷ್ಟಿಸಲು ಅಸಾಧ್ಯ. ಅಡಕೆಗೂ ಎಲೆಚುಕ್ಕೆ ರೋಗ ಬಾಧಿಸಿದೆ. ಬೆಳೆಗಾರರಿಗೆ ದಿಕ್ಕು ತೋಚದಾಗಿದೆ. ಅಡಕೆಯೊಂದಿಗೆ ಮಿಶ್ರ ಬೆಳೆ ಅಳವಡಿಸಿಕೊಳ್ಳಬೇಕಿದೆ. | ರಾಜೇಂದ್ರ ಬೆಚ್ಚಳ್ಳಿ. ಭತ್ತ ಕೃಷಿಕ, ಸಿದ್ದಾಪುರ ಬ್ರಹ್ಮಾವರ ಹಾಗೂ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ವಿಜ್ಞಾನಿಗಳು, ಶೃಂಗೇರಿಯ ಅಡಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕಾರ್ಕಳ, ಕುಂದಾಪುರ ಹಾಗೂ ಉಡುಪಿ ತಾಲೂಕಿನ ವಿವಿಧ ಅಡಕೆ ತೋಟಗಳಲ್ಲಿ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಜಿಲ್ಲೆಯ 18,361 ರೈತರ ಅಡಕೆ ಬೆಳೆ ಹಾನಿಯಾಗಿದ್ದು, ವಿಪತ್ತು ನಿರ್ವಹಣೆಯಡಿ ಪರಿಗಣಿಸಿ, ಎನ್​ಡಿಆರ್​ಎಫ್​ ಮಾರ್ಗಸೂಚಿಯಂತೆ ಒಟ್ಟು 2870.325 ಲಕ್ಷ ರೂ. (ಅಂದಾಜು) ಪರಿಹಾರ ನೀಡುವಂತೆ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ವರದಿ ಸಲ್ಲಿಸಿದ್ದಾರೆ. | ರಾಜು ಎಂ.ಎಸ್​. ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net