

ಹೊನ್ನಾವರ: ತಾಲೂಕಿನಲ್ಲಿ ನಿರಂತರ ಮಳೆ ಮುಂದುವರಿದಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಗುರುವಾರ ಬೆಳಗ್ಗೆ ಕಡಿಮೆಯಾಗಿದ್ದ ಮಳೆ, ಸಂಜೆಯಾಗುತ್ತಿದ್ದಂತೆ ಧಾರಾಕಾರವಾಗಿ ಸುರಿಯಿತು. ನದಿಯ ನೀರಿನ ಮಟ್ಟ ಏರಿಕೆಯಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. 300ಕ್ಕೂ ಅಧಿಕ ಕುಟುಂಬಗಳಿಗೆ ಮತ್ತೆ ಪ್ರವಾಹ ಭೀತಿ ಆವರಿಸಿದೆ.
ಗುಂಡಬಾಳ, ಗುಂಡಿಬೈಲ್, ಚಿಕ್ಕನಕೋಡ, ಕೆಂಚಗಾರ, ಹೆಬೈಲು, ಮುಟ್ಟಾ, ಹಾಡಗೇರಿ, ಹಡಿನಬಾಳ, ಕಾವೂರು, ನಾಥಗೇರಿ, ಕೂಡ್ಲ ನದಿ ತಟದ ಎಡ, ಬಲ ದಂಡೆಯ ಪ್ರದೇಶಗಳಲ್ಲಿ ಪ್ರವಾಹ ಆವರಿಸುತ್ತಿದೆ. ಬಾಸ್ಕೇರಿ ಹೊಳೆಯಲ್ಲಿ ಕೂಡ ನೀರು ತುಂಬಿ ಹರಿಯುತ್ತಿರುವುದರಿಂದ ನದಿ ಅಂಚಿನ ತೋಟಗಳು ಜಲಾವೃತ ಆಗಿ, ಸ್ಥಳೀಯ ಮನೆಗಳಿಗೆ ನೀರು ನುಗ್ಗಿದೆ. ಕೆಕ್ಕಾರ, ಕಡತೋಕ ಭಾಗದಲ್ಲಿ ನೆರೆ ಉಂಟಾಗಿದೆ.
ನೆರೆಪೀಡಿತ ಪ್ರದೇಶದ ಜನರನ್ನು ದೋಣಿಯ ಮೂಲಕ ಕಾಳಜಿ ಕೇಂದ್ರಕ್ಕೆ ಕರೆ ತರಲಾಯಿತು. ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರದಲ್ಲಿ ಸಕಲ ವ್ಯವಸ್ಥೆ ಮಾಡಲಾಯಿತು. ನೋಡಲ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಆರೋಗ್ಯ ಇಲಾಖೆಯವರು ನೆರೆ ಪ್ರದೇಶಗಳ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.