

ಭಟ್ಕಳ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಜನಜೀವನ ಅಸ್ತವ್ಯಸ್ತವಾಗಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ತಾಲೂಕಿನಲ್ಲಿ ಸೋಮವಾರ ರಾತ್ರಿಯಿಂದ ಮಳೆ ಆರಂಭವಾಗಿದ್ದು, ಬಳಿಕ ಕೊಂಚ ಬಿಡುವು ನೀಡಿತ್ತು. ಮಂಗಳವಾರ ಬೆಳಗ್ಗೆ 11ಕ್ಕೆ ಆರಂಭವಾಗಿದ್ದ ಮಳೆ ಎಡಬಿಡದೆ ಸುರಿಯಿತು. ಮಳೆ ರಭಸಕ್ಕೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ರಸ್ತೆಗಳೆಲ್ಲ ಕೃತಕ ಕೆರೆಯಂತಾಗಿವೆ. ಭಟ್ಕಳ ಸಂಶುದ್ದೀನ ಸರ್ಕಲ್ ಬಳಿ ಕೆಸರಿನ ಗದ್ದೆಯಂತಾಗಿದೆ. ವಾಹನ ಸವಾರರು ಮಾತ್ರವಲ್ಲದೆ ಸಾರ್ವಜನಿಕರು ರಸ್ತೆ ದಾಟಲು ಹರಸಾಹಸಪಟ್ಟರು.
ರಂಗಿನಕಟ್ಟೆ ಸರ್ಕಲ್‌ನಲ್ಲಿ ನೀರು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಕಂಡುಬಂದಿದೆ. ತೆಂಗಿನಗುಂಡಿ, ತಲಾಂದ, ಆಸರಕೇರಿ, ಮುರ್ಡೇಶ್ವರ, ಭಟ್ಕಳ ಪಟ್ಟಣದ ಮುಖ್ಯರಸ್ತೆ ಎಲ್ಲೆಲ್ಲೂ ಜಲಧಾರೆ ಭೋರ್ಗರೆಯುತಿತ್ತು. ಹಳ್ಳಕೊಳ್ಳಗಳು ತುಂಬಿ ಅಲ್ಲಿನ ನೀರು ರಸ್ತೆಯಲ್ಲಿ ಹರಿಯುತು. ಸಂಜೆ ಮಳೆ ಕೊಂಚ ಬಿಡುವು ನೀಡಿತು. ಇದರಿಂದ ಪ್ರವಾಹದ ಭೀತಿಯಲ್ಲಿದ್ದ ಜನರಿಗೆ ಕೊಂಚ ನಿರಾಳತೆ ಮೂಡಿತು. ಮತ್ತೆ ಮಳೆಯಾಗುವ ಸಂಭವ ಇರುವುದರಿಂದ ತಾಲೂಕಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅಪಾಯದ ಮುನ್ಸೂಚನೆ ಕಂಡು ಬಂದಲ್ಲಿ ತಕ್ಷಣ ಕಂದಾಯ ಇಲಾಖೆಯ ಸಹಾಯವಾಣಿಗೆ ಕರೆ ಮಾಡುವಂತೆ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಸಾರ್ವಜನಿಕರಲ್ಲಿ ಮನವಿ ಮಡಿದ್ದಾರೆ.