

ಚಿಕ್ಕಬಳ್ಳಾಪುರ: ನಿರಂತರ ಮಳೆ, ಮೋಡ ಮುಸುಕಿದ ವಾತಾವರಣ, ಮಣ್ಣಿನಲ್ಲಿ ಅಧಿಕ ತೇವಾಂಶದ ಹಿನ್ನೆಲೆಯಲ್ಲಿ ಆಲೂಗಡ್ಡೆ ಬಿತ್ತನೆಗೆ ತೊಡಕಾಗಿದೆ.
ಈ ಭಾಗದ ಪ್ರಮುಖ ಬೆಳೆಗಳ ಪೈಕಿ ಆಲೂಗಡ್ಡೆ ಸಹ ಒಂದು. ಜಿಲ್ಲೆಯಲ್ಲಿ ೨೭೪೩ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಇಲ್ಲಿ ಉತ್ಪನ್ನಕ್ಕೆ ಭಾರಿ ಬೇಡಿಕೆ ಇದ್ದು ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಣಾ ಸೇರಿದಂತೆ ವಿವಿಧೆಡೆ ಸಾಗಾಣೆಯಾಗುತ್ತಿರುತ್ತದೆ. ಬೆಳೆಗೆ ಯಾವುದೇ ರೋಗ ಬಾಧಿಸದಿದ್ದರೆ ಗುಣಮಟ್ಟದ ಇಳುವರಿ ಪ್ರಮಾಣಕ್ಕೆ ತಕ್ಕಂತೆ ಒಳ್ಳೆಯ ಆದಾಯ ಲಭಿಸುತ್ತದೆ.
*ಬಿತ್ತನೆ ಅವಧಿ
ಈಗಾಗಲೇ ಬಿತ್ತನೆ ಅವಧಿ ಪ್ರಾರಂಭವಾಗಿದ್ದು ಇದಕ್ಕೆ ರೈತರು ಒಲವು ಹೊಂದಿದ್ದರೂ ಸಹ ಹವಾಮಾನ ವೈಪರೀತ್ಯವು ಸಮಸ್ಯೆಯಾಗಿದೆ.
ಸಾಮಾನ್ಯವಾಗಿ ಅಕ್ಟೋಬರ್, ನವೆಂಬರ್‌ನಲ್ಲಿ ಆಲೂಗಡ್ಡೆ ಬಿತ್ತನೆಗೆ ಸೂಕ್ತ ಅವಧಿ. ಇದಕ್ಕೆ ಈ ಭಾಗದ ವ್ಯಾಪಾರಸ್ಥರು ಪಂಜಾಬ್‌ನ ಜಲಂಧರ್ ಸೇರಿದಂತೆ ವಿವಿಧ ಭಾಗಗಳಿಂದ ಗುಣಮಟ್ಟದ ಬಿತ್ತನೆ ಗಡ್ಡೆಗಳನ್ನು ಲೋಡುಗಟ್ಟಲೇ ತರಿಸಿಕೊಂಡಿದ್ದು ಎಪಿಎಂಸಿ ಯಾರ್ಡುಗಳಲ್ಲಿ ಮೂಟೆಗಳನ್ನು ವ್ಯಾಪಾರಕ್ಕಿಡಲಾಗಿದೆ. ಪ್ರಸ್ತುತ ಪ್ರತಿ ಕ್ವಿಂಟಾಲ್‌ಗೆ ೧೭೦೦ ರಿಂದ ೨೪೦೦ ರೂ ವರೆಗೂ ದರ ನಿಗದಿಯಾಗಿದೆ. ಗುಣಮಟ್ಟ ಹಾಗೂ ಬೇಡಿಕೆ ಅನುಗುಣವಾಗಿ ಏರುಪೇರು ಕಂಡು ಬರುತ್ತಿದೆ. ಇದರ ನಡುವೆ ಬದಲಾದ ಹವಾಮಾನವು ಬೆಳೆಗಾರರಿಗೆ ತಲೆ ನೋವಾಗಿ ಪರಿಣಿಮಿಸಿದೆ.
*ಮಳೆಯ ಸಮಸ್ಯೆ
ಮುಂಗಾರು ಅಂತ್ಯ ಹಾಗೂ ಹಿಂಗಾರಿನ ಪ್ರಾರಂಭದ ಹಂತದಲ್ಲಿ ಈ ಭಾಗದಲ್ಲಿ ಊತ್ತಮ ಮಳೆ ಸುರಿಯುತ್ತಿದೆ. ಹೆಚ್ಚಿನ ಅವಧಿ ಮೋಡ ಮುಸುಕಿದ ವಾತಾವರಣ ಇದೆ. ಮುಂಬರುವ ಮೂರ್ನಾಲ್ಕು ದಿನ ಊತ್ತಮ ಮಳೆ ಸುರಿಯುವುದರ ಬಗ್ಗೆ ಹವಾಮಾನ ಇಲಾಖೆಯು ವರದಿ ನೀಡಿದ್ದು ಯೆಲ್ಲೋ ಅಲಾರ್ಟ್ ಬೇರೆ ಘೋಷಿಸಲಾಗಿದೆ. ಈಗಾಗಲೇ ಅಕ್ಟೋಬರ್‌ನಲ್ಲಿ ವಾಡಿಕೆ ಪ್ರಮಾಣಕ್ಕಿಂತಲೂ ಹೆಚ್ಚಿನ ಮಳೆ ಸುರಿದಿದ್ದು ನವೆಂಬರ್‌ನಲ್ಲೂ ಬಿಡುವುದು ನೀಡದಿದ್ದಲ್ಲಿ ಬಿತ್ತನೆ ಗುರಿಯಲ್ಲಿ ಮತ್ತಷ್ಟು ಹಿನ್ನಡೆಯಾಗುತ್ತದೆ. ಹಾಗೆಯೇ ಬೆಳೆಗೆ ಅಂಗಮಾರಿ ಸೇರಿದಂತೆ ವಿವಿಧ ಕಾಯಿಲೆಗಳು ಕಾಡುವ ಸಾಧ್ಯತೆ ಹೆಚ್ಚು ಎಂಬ ಆತಂಕ ಇದೆ.
*ವ್ಯಾಪಾರಿಗಳ ಆದಾಯ ಲೆಕ್ಕಾಚಾರ
ಪ್ರತಿ ವರ್ಷದಂತೆ ವ್ಯಾಪಾರಿಗಳು ಆದಾಯ ನಿರೀಕ್ಷೆಯಲ್ಲಿ ಎಪಿಎಂಸಿ ಯಾರ್ಡಿನಲ್ಲಿ ಮೂಟೆಗಳನ್ನು ದಾಸ್ತಾನಿಟ್ಟುಕೊಂಡಿದ್ದು ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಉತ್ತಮ ವ್ಯಾಪಾರದ ನಿರೀಕ್ಷೆ ಹೊಂದಿದ್ದರು. ಆದರೆ, ಇದರ ಲೆಕ್ಕಾಚಾರವೆಲ್ಲವೂ ಉಲ್ಟಾ ಪಲ್ಟಾ ಹೊಡೆದಿದೆ. ಹೂಡಿಕೆಯ ಬಂಡವಾಳಕ್ಕೆ ಅನುಗುಣವಾಗಿ ಲಾಭ ಸಿಕ್ಕಿಲ್ಲ. ಇದರಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಪ್ರಸ್ತುತ ರೈತರು ಮಾರುಕಟ್ಟೆಗೆ ಬಂದು ಬೆಳೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದುಕೊಂಡು ಹೋಗುತ್ತಿದ್ದರೂ ಬಿತ್ತನೆ ಆಲೂಗಡ್ಡೆ ಖರೀದಿಸುತ್ತಿಲ್ಲ. ಕೆಲವೆಡೆ ಕೃಷಿ ಜಮೀನಲ್ಲಿ ಗಡ್ಡೆಯು ಮಳೆ ಹಾಗೂ ಅಧಿಕ ತೇವಾಂಶಕ್ಕೆ ಕೊಳೆತು ಹೋಗಿದ್ದು ನಾನಾ ಸಮಸ್ಯೆಗಳ ಹಿನ್ನೆಲೆಯಲ್ಲಿ ಒಲವು ಕಡಿಮೆಯಾಗುತ್ತಿದೆ. ಪರ್ಯಾಯ ಬೆಳೆಗಳ ಕಡೆಗೆ ಗಮನಹರಿಸಲಾಗುತ್ತಿದೆ. ಇದರಿಂದ ವ್ಯಾಪಾರಿಗಳು ನಷ್ಟದ ಭೀತಿಯಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.