

ಬೆಳ್ತಂಗಡಿ: ಆರೋಗ್ಯ ಕ್ಷೇತ್ರದಲ್ಲಿ ಅನವರತ ಸೇವೆಯನ್ನು ನೀಡುತ್ತಾ ಬೆಳೆದ ಬೆನಕ ಆಸ್ಪತ್ರೆ ಇನ್ನಷ್ಟು ಬೆಳೆದು ಜನಹಿತ ಕೆಲಸ ಮಾಡುವಂತಾಗಲಿ ಎಂದು ಪ್ರಮುಖರಾದ ಸೀತಾರಾಮ ಭಟ್ ಹೇಳಿದರು. ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮ ವರ್ಷದ ಲಾಂಛನವನ್ನು ಆಸ್ಪತ್ರೆಯ ಆವರಣದಲ್ಲಿ ಇತ್ತೀಚೆಗೆ ಅನಾವರಣಗೊಳಿಸಿ ಮಾತನಾಡಿ, ರಜತ ಸಂಭ್ರಮ ಲಾಂಛನವು ಬೆನಕ ಆಸ್ಪತ್ರೆಯ ನಿಷ್ಕಲ್ಮಶ, ಗುಣಮಟ್ಟದ ಹಾಗೂ ನಗುಮುಖದ ಸೇವೆಯ ಪ್ರತೀಕ. ಇನ್ನಷ್ಟು ಜನಹಿತ ಸಂತೃಪ್ತ ಸೇವೆಯನ್ನು ಸಮರ್ಪಣಾಭಾವದಿಂದ ಒದಗಿಸುವಲ್ಲಿ ಈ ಲಾಂಛನ ಪ್ರೇರಣೆಯಾಗಲಿ ಎಂದರು. ಬೆನಕ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಗೋಪಾಲಕೃಷ್ಣ ಪ್ರಾಸ್ತವಿಕವಾಗಿ ಮಾತನಾಡಿ, 25 ವರ್ಷಗಳ ಹಿಂದೆ ಸಾಮಾನ್ಯ ಕಾಯಿಲೆಗಳಿಗೆ ಒಳರೋಗಿ ಚಿಕಿತ್ಸೆ ಪಡೆಯಲು ದೂರದ ಪಟ್ಟಣಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಅಂದಿನ ಅಗತ್ಯ ಮನಗೊಂಡು ಆರಂಭವಾದ ಕೇವಲ 10 ಹಾಸಿಗೆಗಳ ಆಸ್ಪತ್ರೆ, ಇಂದು ಸುಸಜ್ಜಿತ 100 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಬೆಳೆದು ನಿಂತಿದೆ. ಆಧುನಿಕ ಸೌಲಭ್ಯ, ಗುಣಮಟ್ಟದ ಸೇವೆ, ಸೇವಾ ಮನೋಭಾವದ ಸಿಬ್ಬಂದಿ ಹಾಗೂ ನಮ್ಮ ಮೇಲೆ ಸಾರ್ವಜನಿಕರ ವಿಶ್ವಾಸದಿಂದಾಗಿ ನಮ್ಮ ಸಂಸ್ಥೆ ಬೆಳೆದು ನಿಂತಿದೆ. ನಾವು ನೀಡುವ ಸೇವೆ ನಮಗೆ ತೃಪ್ತಿ ತರುವುದರೊಂದಿಗೆ ನಮ್ಮಲ್ಲಿಗೆ ಬರುವ ರೋಗಿಗಳು ಗುಣಮುಖರಾಗಿ ಸಂತೃಪ್ತಿಯ ನಗುವಿನೊಂದಿಗೆ ತೆರಳಬೇಕೆಂಬುದೇ ನಮ್ಮ ಆಶಯ ಎಂದರು. ಕಾರ್ಯಕ್ರಮದಲ್ಲಿ ಡಾ.ಭಾರತಿ, ಡಾ.ಆದಿತ್ಯ ಡಾ.ಅಂಕಿತಾ ಹಾಗೂ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವಸ್ಯ ವಂದಿಸಿದರು.
ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದ ನಂತರ ಗುಣಮುಖರಾಗಿ ಸಂತಸದಿಂದ ಮರಳುವ ಜನತೆಯನ್ನು ಕಂಡಾಗ ವೈದ್ಯರ ಮನದಲ್ಲೊಂದು ಸಂತೃಪ್ತ ಭಾವ ಮೂಡುತ್ತದೆ. ಇಂಥ ಸಂತೃಪ್ತಿಯಲ್ಲೇ ಸಾರ್ಥಕತೆ ಕಾಣುವ ಪ್ರಯತ್ನ ನಮ್ಮದು. ಗುರುಹಿರಿಯರ ಆಶೀರ್ವಾದ, ಜನರ ಪ್ರೀತಿ, ನಮ್ಮ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರ ಸಹಕಾರದಿಂದಾಗಿ ನಮ್ಮ ಆಸ್ಪತ್ರೆಗೆ ಆಧುನಿಕ ಸ್ಪರ್ಶ ನೀಡಲು ಸಾಧ್ಯವಾಗಿದೆ. ಡಾ.ಗೋಪಾಲಕೃಷ್ಣ, ಬೆನಕ ಆಸ್ಪತ್ರೆಯ ಆಡಳಿತ ನಿರ್ದೇಶಕ