ನಿರಂತರ ಪ್ರತಿಭಟನೆ ಅನಿವಾರ್ಯ

ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಹಾಲ್‌ನಲ್ಲಿ ನಡೆದ ರೈತ ಹೋರಾಟ ಸಮಿತಿ ಸಭೆಯಲ್ಲಿ ಅಧ್ಯಕ್ಷ ಸುರೇಶ್ ಮಾತನಾಡಿದರು. ಮೇದಪ್ಪ, ದೀಪಕ್, ಲವ, ದಿನೇಶ್ ಇತರರು ಇದ್ದರು.
ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಹಾಲ್‌ನಲ್ಲಿ ನಡೆದ ರೈತ ಹೋರಾಟ ಸಮಿತಿ ಸಭೆಯಲ್ಲಿ ಅಧ್ಯಕ್ಷ ಸುರೇಶ್ ಮಾತನಾಡಿದರು. ಮೇದಪ್ಪ, ದೀಪಕ್, ಲವ, ದಿನೇಶ್ ಇತರರು ಇದ್ದರು.
Published on

ಸೋಮವಾರಪೇಟೆ: ಕೃಷಿ ಮಾಡುತ್ತಿರುವ ಸಿ ಆ್ಯಂಡ್ ಡಿ ಭೂಮಿಯ ಹಕ್ಕುಪತ್ರವನ್ನು ರೈತರಿಗೆ ನೀಡಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ರೈತರ ಹೋರಾಟವನ್ನು ಸರ್ಕಾರ ಲಘುವಾಗಿ ಪರಿಗಣಿಸಿದ್ದು, ರೈತರು ಹೋರಾಟದ ಸ್ವರೂಪವನ್ನೇ ಬದಲಾಯಿಸಬೇಕಾದ ಅನಿವಾರ್ಯತೆ ಒದಗಿದೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ. ಸುರೇಶ್ ಹೇಳಿದರು.

ಸೋಮವಾರ ಇಲ್ಲಿನ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಸಭಾಂಗಣದಲ್ಲಿ ಆಯೋಜಿಸಿದ್ದ ರೈತ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ರೈತರು ಎದುರಿಸುತ್ತಿರುವ ಸಿ ಮತ್ತು ಡಿ, ಸೆಕ್ಷನ್4, ಡೀಮ್ಡ್ ಫಾರೆಸ್ಟ್ ಸಮಸ್ಯೆಗಳ ಬಗ್ಗೆ ಈಗಾಗಲೇ ಸಂಬಂಧಿಸಿದ ಜನಪ್ರತಿನಿಧಿಗಳು, ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟದ ಸ್ವರೂಪ ಬದಲಿಸಿ, ನಿರಂತರ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಹೇಳಿದರು.

ನ. 3ರಂದು ಸೋಮವಾರಪೇಟೆಯ ಜೇಸಿ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸಿ, ಅರಣ್ಯ ಇಲಾಖೆಯ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮತ್ತೊಮ್ಮೆ ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಯಿತು. ಇದರೊಂದಿಗೆ ಚಳಿಗಾಲದ ಅಧಿವೇಶನ ಸಂದರ್ಭ ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸಿ, ಸರ್ಕಾರದ ವಿರುದ್ಧ ಹೋರಾಟ ನಡೆಸಿ, ಅಧಿವೇಶನದ ಗಮನ ಸೆಳೆಯಲು ತೀರ್ಮಾನಿಸಲಾಯಿತು.

ಡೀಮ್ಡ್ ಫಾರೆಸ್ಟ್ ಎಂದು ಅರಣ್ಯಾಧಿಕಾರಿಗಳು ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆಯೇ ಹೊರತು ಯಾವುದೇ ದಾಖಲೆಗಳನ್ನು ನೀಡುತ್ತಿಲ್ಲ. ಅರಣ್ಯ ಇಲಾಖೆಯವರು ಮುಕ್ಕೋಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ ಅವರ ಜಾಗಕ್ಕೆ ಅತಿಕ್ರಮಣ ಮಾಡಿ ಗಿಡಗಳನ್ನು ಕಡಿದಿದ್ದಾರೆ. ಇದೀಗ ಅರಣ್ಯ ಇಲಾಖೆಯಿಂದ ಸಂತ್ರಸ್ಥ ನಾಣಿಯಪ್ಪ ಅವರಿಗೆ ನೋಟೀಸ್ ಕೊಟ್ಟಿದ್ದಾರೆ. ಇಂತಹ ಉಪದ್ರವಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಈವರೆಗೆ ಆಡಳಿತ ಮಾಡಿದ ಎಲ್ಲ ಪಕ್ಷದವರೂ ರೈತರಿಗೆ ಮೋಸ ಮಾಡಿದವರೇ ಆಗಿದ್ದಾರೆ. ಎಲ್ಲ ಪಕ್ಷದ ಶಾಸಕರು ವಿಧಾನ ಸೌಧದಲ್ಲಿ ಒಂದಾಗುತ್ತಾರೆ. ಹೋರಾಟ ಎಂದು ಬಂದರೆ ರಾಜಕೀಯ ಬಿಟ್ಟು ಬೀದಿಗೆ ಇಳಿಯಬೇಕು ಎಂದರು. ಇದೀಗ ಸಿ ಮತ್ತು ಡಿ ಜಾಗದ ಕೇಸ್ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದು ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ವಿಧಾನ ಸೌಧದಲ್ಲಿ ಯಾರೂ ರೈತರ ಪರ ಮಾತಾಡಿಲ್ಲ ಎಂದರು.

ಸಮಿತಿ ಸಂಚಾಲಕ ಬಿ.ಜೆ.ದೀಪಕ್ ಮಾತನಾಡಿ, ಅಧಿಕಾರಿಗಳು ಅವರಿಗೆ ಬೇಕಾದ ದಾಖಲೆಗಳನ್ನು ಮಾಡಿಟ್ಟುಕೊಂಡಿದ್ದಾರೆ. ಹೋರಾಟದ ಮೂಲಕವೇ ಸರ್ಕಾರದ ಗಮನ ಸೆಳೆಯಬೇಕು. ಸದ್ಯದ ಮಟ್ಟಿಗೆ ನ್ಯಾಯಾಲಯದಲ್ಲಿ ಹೊರಾಟ ಮಾಡದೇ ಸಂಘಟನಾತ್ಮಕವಾಗಿ ಹೋರಾಟ ಮಾಡಿ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳಿಗೆ ತಿಳುವಳಿಕೆ ನೀಡಬೇಕು. ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಹೂವಯ್ಯ, ರೈತ ಹೋರಾಟ ಸಮಿತಿ ಕಾರ್ಯದರ್ಶಿ ಕೂತಿ ದಿವಾಕರ್ ಸೇರಿದಂತೆ 50ಕ್ಕೂ ಅಧಿಕ ಗ್ರಾಮಗಳ ಗ್ರಾಮ ಸಮಿತಿ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net