

ಮಂಗಳೂರು: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ನಿರಂತರ ಅಭ್ಯಾಸ ಮತ್ತು ಶಿಸ್ತು ಮೈಗೂಡಿಸಿಕೊಳ್ಳುವುದು ಅವಶ್ಯ ಎಂದು ಅಂತರಾಷ್ಟ್ರೀಯ ಡೆಕಥ್ಲಾನ್ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ಹಾಗೂ ಕಾಮನ್ ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ತೇಜಶ್ವಿನ್ ಶಂಕರ್ ಹೇಳಿದರು.
ನಗರದ ಮಂಗಳ ಕ್ರೀಡಾಂಗದಲ್ಲಿ ಶನಿವಾರ ಎಂಡ್ಯೂರೆನ್ಸ್ ಅಕಾಡೆಮಿ ಮತ್ತು ಖೇಲೋ ಇಂಡಿಯಾ ಮಂಗಳೂರು ಸೆಂಟರ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕ್ರೀಡೆಯ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಮುನ್ನಡೆಯುವುದು ಅತೀ ಅವಶ್ಯ. ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯವಿದೆ ಎಂದವರು ಹೇಳಿದರು.
ಈ ಸಂದರ್ಭ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿಸೋಜ,ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ತಾರಾನಾಥ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಖೇಲೋ ಇಂಡಿಯಾ ಕೋಚ್ ಭಕ್ಷಿತ್ ಸಾಲಿಯಾನ್,ಎಂಡ್ಯೂರೆನ್ಸ್ ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು.