

ಮೈಸೂರು: ಸಾಧನೆ ಮತ್ತು ಯಶಸ್ಸಿಗೆ ನಿರಂತರ ಕಲಿಕೆ ಅಗತ್ಯ. ಕಲಿಕೆ ನಿಂತ ಕ್ಷಣ ಸಾಧನೆ ಮತ್ತು ಯಶಸ್ಸು ಅಂತ್ಯವಾಗುತ್ತದೆ ಎಂದು ಉತ್ತರಪ್ರದೇಶದ ಗೊಕಲ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಸಯ್ಯದ್ ಅಖಿಲ್ ಅಹಮದ್ ಹೇಳಿದರು.
ಜ್ಞಾನಬುತ್ತಿ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ಪಿಡಿಒ, ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷಾ ಉಚಿತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಜಾಗತೀಕರಣದ ಯುಗದಲ್ಲಿ ಜ್ಞಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಶರವೇಗದಲ್ಲಿ ಓಡುತ್ತಿರುವ ಜಗತ್ತಿನೊಂದಿಗೆ ಸ್ಪರ್ಧೆ ಮಾಡಲು ನಿರಂತರ ಕಲಿಕೆಯೊಂದೆ ಪ್ರಬಲ ಅಸ್ತ್ರವಾಗಿದೆ ಎಂದರು.
ಮನಸ್ಸಿಟ್ಟು ಮಾಡುವ ಕೆಲಸ ಅಳಿಲು ಸೇವೆಯೇ ಆದರೂ ಭವಿಷ್ಯದಲ್ಲಿ ಅದು ಮಹತ್ತರ ಪಾತ್ರವನ್ನು ಮತ್ತು ಬದುಕಿಗೆ ತಿರುವನ್ನು ನೀಡುತ್ತದೆ. ನಿರಂತರ ಪ್ರಾಮಾಣಿಕ ಪರಿಶ್ರಮದಿಂದ ಅಸಾಧ್ಯವನ್ನು ಸಾಧ್ಯವಾಗಿಸುವ ಶಕ್ತಿ ಎಲ್ಲರಿಗೂ ಇದೆ ಎಂದರು.
ಆಡಳಿತ ತರಬೇತಿ ಸಂಸ್ಥೆಯ ಸಂಯೋಜಕಿ ಶ್ರೀವಳ್ಳಿ ಮಾತನಾಡಿ, ಒಂದು ಕಾಲದಲ್ಲಿ ಕಲಾ ವಿಭಾಗದಿಂದ ಬಂದವರು ಅಧಿಕಾರಿಗಳಾ ಗುತ್ತಿದ್ದರು. ಆದರೆ ಇಂದು ಇಂಜಿನಿಯರ್ ಮತ್ತು ವೈದ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳಾಗಿ ಬರುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ದಿನಪತ್ರಿಕೆಗಳ ಸಂಪಾದಕೀಯವನ್ನು ತಪ್ಪದೆ ಓದಿ ಮನನ ಮಾಡಿಕೊಳ್ಳುವ ಅಭ್ಯಾಸವನ್ನು ದಿನನಿತ್ಯ ಮಾಡಬೇಕು. ನಿಮ್ಮ ಊರಿನ ಹತ್ತಿರದ ಗ್ರಂಥಾಲಯಗಳಿಗೆ ಭೇಟಿ ಕೊಟ್ಟು ದಿನಪತ್ರಿಕೆ ಮತ್ತು ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಅಧ್ಯಯನ ಮಾಡಬೇಕೆಂದು ಕರೆಕೊಟ್ಟರು.
ನಗರಪಾಲಿಕೆ ಆಯುಕ್ತ ಆಸಾದ್ ಉರ್ ರೆಹಿಮಾನ್ ಷರೀಪ್ ಮಾತನಾಡಿ, ಕಠಿಣ ಪರಿಶ್ರಮ ಮತ್ತು ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡರೆ ಯಶಸ್ಸಿನ ಹಾದಿಯಲ್ಲಿ ಸುಗಮವಾಗಿ ಸಾಗಬಹುದು ಎಂದರು.
ಅಖಿಲ ಭಾರತ ಸಹಕಾರ ಮಾರುಕಟ್ಟೆ ನಿರ್ದೇಶಕ ವೈ.ಎನ್. ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು. ಜ್ಞಾನಬುತ್ತಿ ಸಂಸ್ಥೆಯ ಪದಾಧಿಕಾರಿಗಳಾದ ಜೈನಹಳ್ಳಿ ಸತ್ಯನಾರಾಯಣ ಗೌಡ, ಎಚ್.ಬಾಲಕೃಷ್ಣ, ಪ್ರೊ.ಕೃ.ಪ. ಗಣೇಶ್, ಡಾ.ಎಸ್.ಬಿ.ಎಂ. ಪ್ರಸನ್ನ, ಡಾ. ನಾಗಾಚಾರ್, ಡಾ. ಉಮೇಶ್ ಬೇವಿನಹಳ್ಳಿ, ಎಸ್. ಗಣೇಶ್, ಕಿರಣ್ ಕೌಶಿಕ್, ಕೆ.ವೈ. ನಾಗೇಂದ್ರ ಇದ್ದರು.