

ಬೆಳಗಾವಿ: ಹುಬ್ಬಳ್ಳಿ- ಧಾರವಾಡ ಅಭಿವದ್ಧಿ ಸಲುವಾಗಿ ನಮ್ಮ ಜಿಲ್ಲೆಗೆ ನಿರಂತರವಾಗಿ ಅನ್ಯಾಯ ಮಾಡಲಾಗುತ್ತಿದೆ ಎಂದು ರಾಜಕುಮಾರ ಟೋಪಣ್ಣವರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಮ್ಮ ನೀರು ನಮ್ಮ ಹಕ್ಕು ಹೋರಾಟ ಮಾಡುತ್ತಿರುವುದು ಹಿಡಕಲ್ ಜಲಾಶಯದ ಉಳಿವಿಗಾಗಿ ಮಾತ್ರವಲ್ಲ, ಬೆಳಗಾವಿ ಜಿಲ್ಲೆಗೆ ನಿರಂತರವಾಗಿ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಹೋರಾಟ ನಡೆಸಲಾಗುತ್ತಿದೆ. ನಗರದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗೆ ನೀರು ಸರಬರಾಜು ಮಾಡುವವರು ಪಾಲಿಕೆಯವರು. ಮೇಯರ್ ಹಾಗೂ ಉಪಮೇಯರ್ ವಿಶೇಷ ಸಭೆ ಕರೆದು ಹಿಡಕಲ್ ಜಲಾಶಯದ ನೀರು ಧಾರವಾಡಕ್ಕೆ ಹೋಗುತ್ತಿರುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿ ಠರಾವ್ ಪಾಸ್ ಮಾಡಬೇಕು ಎಂದು ಆಗ್ರಹಿಸಿದರು.
ಬೆಳಗಾವಿಗೆ ಬರಬೇಕಿದ್ದ ಐಐಟಿ, ಆರ್ಟಿಫಿಷಿಯಲ್ ಇಂಟಲಿಜಂಟ್, ಎಕ್ಸಿಲಿಯಂಟ್ ಸೇಂಟರ್ ಸೇರಿದಂತೆ ವಿವಿಧ ಉದ್ಯಮಗಳು ಹುಬ್ಬಳ್ಳಿ- ಧಾರವಾಡಕ್ಕೆ ಹೋದವು. ವಂದೇ ಭಾರತ್ ರೈಲು ಯೋಜನೆ ಆರಂಭಿಸಿದಾಗ ಹುಬ್ಬಳ್ಳಿ- ಬೆಂಗಳೂರು ಆರಂಭಿಸಿದರು. ಬೆಳಗಾವಿಗೆ ಕೇಳಿದಾಗ ತಾಂತ್ರಿಕ ಸಮಸ್ಯೆ ಹೇಳಿದರು. ಆದರೆ ಹುಬ್ಬಳ್ಳಿ- ಪುಣೆಗೆ ರೈಲು ಬಿಡುತ್ತಾರೆ ಎಂದರೆ ಈಗ ತಾಂತ್ರಿಕ ಸಮಸ್ಯೆ ಆಗಲಿಲ್ಲವೇ ಎಂದು ಪ್ರಶ್ನಿಸಿದರು.
ಸಾಮಾಜಿಕ ಕಾರ್ಯಕರ್ತ ಸುಜೀತ ಮುಳಗುಂದ ಮಾತನಾಡಿ, 167 ಕೋಟಿ ರೂ.ವೆಚ್ಚದಲ್ಲಿ ಎಸ್‌ಟಿಪಿ ಘಟಕದ ಕಾಮಗಾರಿ ಆರಂಭವಾಗಿದೆ. ಈ ಪೈಕಿ 101 ಕೋಟಿ ರೂ. ವೆಚ್ಚವಾಗಿದೆ. ಇನ್ನೂ 20 ಕೋಟಿ ರೂ. ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಿದರೆ ಈ ನೀರನ್ನು ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಕೈಗಾರಿಕಾ ಪ್ರದೇಶಗಳಿಗೆ ಸರಬರಾಜು ಮಾಡಬಹುದು ಎಂದರು.
ಹಿಡಕಲ್ ಜಲಾಶಯದ ನೀರು ಹುಬ್ಬಳ್ಳಿ- ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕೊಂಡೊಯ್ಯಲು ಪೈಪಲೈನ್ ಕಾಮಗಾರಿ ನಡೆಸುತ್ತಿರುವುದಕ್ಕೆ ವಿರೋಧವಿದೆ. ಯಾರೊಂದಿಗೂ ನಿರ್ಣಯ ಮಾಡದೆ ಕೆಐಡಿಬಿಯವರು ಕಾಮಗಾರಿ ಆರಂಭಿಸಿರುವುದು ಸರಿಯಲ್ಲ ಎಂದರು.