ಯಶಸ್ಸಿನ ಮೆಟ್ಟಿಲು ಹತ್ತಲು ಸತತ ಪರಿಶ್ರಮ ಅಗತ್ಯ

21-npk -4
ನಾಪೋಕ್ಲು ಕೆಪಿಎಸ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪರೀಕ್ಷಾ ಸಿದ್ಧತೆ ಪ್ರೇರಣಾ ಕಾರ್ಯಕ್ರಮವನ್ನು ಗಣ್ಯರು ಗಿಡಕ್ಕೆ ನೀರೆರೆದು ಉದ್ಘಾಟಿಸಿದರು. ಬಿ.ಜಿ.ಅನಂತಶಯನ, ಎಂ.ಚಂದ್ರಕಾಂತ್, ಡಾ.ದೊಡ್ಡೇಗೌಡ, ಭಾರಧ್ವಾಜ ಕೆ.ಆನಂದ, ಎಚ್.ಎನ್.ಭಾರತಿ ಇತರರಿದ್ದರು.
Published on

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಸಲಹೆ

ನಾಪೋಕ್ಲು : ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟವಾಗಿದ್ದು ಯಶಸ್ಸಿನ ಮೆಟ್ಟಿಲನ್ನು ಏರಲು ವಿದ್ಯಾರ್ಥಿಗಳು ಸತತವಾಗಿ ಶ್ರಮವಹಿಸಬೇಕು ಎಂದು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು.

ಇಲ್ಲಿನ ಕೆಪಿಎಸ್ ಶಾಲೆಯಲ್ಲಿ ಶನಿವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪರೀಕ್ಷಾ ಸಿದ್ಧತೆ ಪ್ರೇರಣಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ಜೀವನದಲ್ಲಿ ಅಸಾಧ್ಯವಾದುದು ಏನೂ ಇಲ್ಲ. ಗುರು ನಿಮ್ಮ ಭವಿಷ್ಯವನ್ನು ರೂಪಿಸುತ್ತಾರೆ. ಅದಕ್ಕೆ ಗುರುವಿಗೆ ದೇವರ ಸ್ಥಾನವನ್ನು ಕಲ್ಪಿಸಲಾಗಿದೆ. ಭವಿಷ್ಯವನ್ನು ರೂಪಿಸಿಕೊಳ್ಳಲು ಹೆಚ್ಚು ತಯಾರಿ ನಡೆಸಬೇಕಾಗುತ್ತದೆ. ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಸಮಾಜವನ್ನು ಬೆಳೆಸುವ, ಕಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬೆಳೆಯಬೇಕು. ಪರೀಕ್ಷೆ ತಯಾರಿಗೆ ಸಮಯ ವ್ಯರ್ಥ ಮಾಡದೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಕೂಡಿಗೆ ಡಯಟ್ ಪ್ರಾಂಶುಪಾಲ ಎಂ.ಚಂದ್ರಕಾಂತ್ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳನ್ನು ಸ್ನೇಹಿತರನ್ನಾಗಿ ಶಿಕ್ಷಣ ಇಲಾಖೆ ನೋಡುತ್ತಿದೆ. ಈಗಿನ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಮತ್ತು ಸೌಲಭ್ಯವಿದೆ. ಪರೀಕ್ಷೆ ಎಂದರೆ ಭಯ ಬೇಡ ಎಂದ ಅವರು, ವಿದ್ಯಾರ್ಥಿಗಳಿಗೆ ಮನೆಯಲ್ಲಿ ಸಮಸ್ಯೆ ಇದ್ದರೆ ಪಾಲಕರೊಂದಿಗೆ, ಶಾಲೆಯಲ್ಲಿ ಸಮಸ್ಯೆ ಇದ್ದರೆ ಶಿಕ್ಷಕರೊಂದಿಗೆ, ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚಿಸಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳಬಾರದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ದೊಡ್ಡೇಗೌಡ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟ. ನಾಪೋಕ್ಲು ಭಾಗದಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಮನೋಭಾವ ಕಡಿಮೆ ಇರುವುದು ಕಂಡುಬರುತ್ತಿದೆ. ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವನೆಯಿಂದ ಓದದಿದ್ದರೆ ಸಮಸ್ಯೆ ಸುಳಿಯೊಳಗೆ ಸಿಲುಕುತ್ತಾರೆ. ಇದನ್ನು ಮನಗಂಡು ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಭಯವಿಲ್ಲದೆ ಎದುರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರೇರಣಾ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಲೇಖಕ ಸಾಹಿತಿ ಭಾರದ್ವಾಜ ಕೆ.ಆನಂದ, ಕಡಗದಾಳು ಸರ್ಕಾರಿ ಪ್ರೌಢಶಾಲೆ ಗಣಿತ ಶಿಕ್ಷಕಿ ಎಚ್.ಎನ್.ಭಾರತಿ, ನಿವೃತ್ತ ಶಿಕ್ಷಕ ಊ.ರ.ನಾಗೇಶ್, ಶಿಕ್ಷಣ ಸಂಯೋಜಕ ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಎಂ.ಎಸ್.ಶಿವಣ್ಣ, ಶಿಕ್ಷಣ ಸಂಯೋಜಕಿ ಜಾನೆಟ್, ಕೊಡಿಗೆ ಡಯಟ್‌ನ ಹಿರಿಯ ಉಪನ್ಯಾಸಕ ಸ್ವಾಮಿ, ಬಿಆರ್‌ಸಿ ಗುರುರಾಜ್, ಎಸ್‌ಡಿಎಂಸಿ ಪದಾಧಿಕಾರಿಗಳು, ವಿವಿಧ ಶಾಲೆಗಳ ಶಿಕ್ಷಕರು, ನರಿಯಂದಡ ಕೇಂದ್ರ ಪ್ರೌಢಶಾಲೆ, ಕಕ್ಕಬೆ ಪ್ರೌಢಶಾಲೆ, ನೇತಾಜಿ ಪ್ರೌಢಶಾಲೆ, ಎಮ್ಮೆಮಾಡು ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಇನ್ನಿತರ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net