ಗುರಿ ಸಾಧನೆ ಕಡೆಗೆ ನಿರಂತರ ಪ್ರಯತ್ನ ಅಗತ್ಯ: ಡಾ.ಕೆ.ವಿ.ರಾಜೇಂದ್ರ

9
Published on

ಮೈಸೂರು: ಯಾವುದೇ ಸ್ಪರ್ಧಾತ್ಮಕ ಪರೀಕ್ಷಾರ್ಥಿ ಏನನ್ನೇ ಸಾಧಿಸಬೇಕಾದರೂ ಮೊದಲು ತನ್ನ ಗುರಿಯನ್ನು ದೊಡ್ಡದಾಗಿರಿಸಿಕೊಂಡು ಅದರ ಕಡೆಗೆ ನಿರಂತರ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯ ವೃತ್ತಿ ಕೇಂದ್ರ, ನೇಗಿಲಯೋಗಿ ವಿದ್ಯಾವರ್ಧಕ ಸ್ಪರ್ಧಾ ಕೇಂದ್ರದ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಯುವರಾಜ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕೆಎಎಸ್ ಹುದ್ದೆಯ ಆಕಾಂಕ್ಷಿಗಳಿಗೆ ಉಚಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಸಾಮಾನ್ಯವಾಗಿದೆ. ಯುಪಿಎಸ್‌ಸಿ, ಕೆಎಎಸ್ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಲು ಸಿಕ್ಕ ಅವಕಾಶಗಳನ್ನು ಸದುಯೋಗಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿದಿನ 5 ರಿಂದ 6 ಗಂಟೆಗಳ ಕಾಲ ನಿಯಮಿತವಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ಪರೀಕ್ಷಾರ್ಥಿಗೆ ಕಠಿಣ ಪರಿಶ್ರಮ, ತಾಳ್ಮೆ, ಸಮಯ ಪ್ರಜ್ಞೆ , ಏಕಾಗ್ರತೆ ಎಂಬುದು ಬಹಳ ಮುಖ್ಯವಾಗಿದ್ದು, ಅದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ನಾವು ಪ್ರತಿನಿತ್ಯವೂ ಹೊಸದಾಗಿ ನೋಡಿದ, ಕೇಳಿದ ವಿಷಯಗಳನ್ನು ವೈಜ್ಞಾನಿಕವಾಗಿ ಯೋಚಿಸಿ ಅದರ ಬಗ್ಗೆ ತಿಳಿದುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ನಿಗದಿತ ದಿನಾಂಕ ಎಂಬುದಿರುತ್ತದೆ. ಆದರೆ, ಜೀವನದ ಅಧ್ಯಯನದಲ್ಲಿ ಪ್ರತಿದಿನವು ಸಹ ಹೊಸ ಪರೀಕ್ಷೆಗಳು ಎದುರಾಗುತ್ತವೆ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಬದಲು ಪರೀಕ್ಷೆಯನ್ನು ಎದುರಿಸುವಲ್ಲಿ ಆರಂಭದಿಂದಲೂ ಸತತ ಪ್ರಯತ್ನ ಮಾಡಬೇಕು. ಕಠಿಣ ಪರಿಶ್ರಮ, ನಿರಂತರ ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ಪ್ರತಿನಿತ್ಯ ದಿನಪತ್ರಿಕೆಗಳು, ಪುಸ್ತಕಗಳು, ಕಾದಂಬರಿಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕು. ಸ್ಪರ್ಧಾರ್ಥಿಗಳೂ ಯಾವಾಗಲೂ ಐಎಎಸ್, ಐಪಿಎಸ್‌ನಂತಹ ದೊಡ್ಡ ಹುದ್ದೆಗಳಿಗೆ ಸೇರುವ ಆಸೆಯನ್ನು ಹೊಂದಿದ್ದು ಪ್ರಯತ್ನ ಮಾಡಿದ್ದಲ್ಲಿ ಕನಿಷ್ಠ ಪಕ್ಷ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದರು.
ಎಷ್ಟೋ ಸ್ಪರ್ಧಾರ್ಥಿಗಳಲ್ಲಿ ಭಾಷೆಯ ಬಗ್ಗೆ ಗೊಂದಲಗಳಿವೆ. ಇಂಗ್ಲಿಷ್‌ನಲ್ಲೇ ಎಲ್ಲವೂ ಕಡ್ಡಾಯವಲ್ಲ, ಪ್ರಾದೇಶಿಕ ಭಾಷೆಗಳಲ್ಲೂ ಸಹ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ವಿವಿಧ ರೀತಿಯ ಹುದ್ದೆಗಳಿದ್ದರೂ ಪ್ರಶ್ನೆ ಪತ್ರಿಕೆಗಳ ಸ್ವರೂಪ ಒಂದೇ ಆಗಿರುತ್ತದೆ. ಆದ್ದರಿಂದ ಪ್ರಚಲಿತ ವಿದ್ಯಮಾನಗಳು ಹಾಗೂ ಹಳೇ ವರ್ಷದ ಪ್ರಶ್ನೆಪತ್ರಿಕೆಗಳನ್ನು ಹೆಚ್ಚು ಮನನ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಮೈಸೂರು ನಗರಪಾಲಿಕೆ ಆಯುಕ್ತೆ ಡಾ.ಎನ್.ಎನ್.ಮಧು ಮಾತನಾಡಿ, ಸಮಾಜಕ್ಕೆ ಅಧಿಕಾರಿಗಳ ಕೊಡುಗೆ ಹೆಚ್ಚಾಗಿದ್ದು, ಸ್ಪರ್ಧಾರ್ಥಿಗಳು ಶ್ರಮಪಟ್ಟು ನಿರಂತರವಾಗಿ ಓದುವ ಅಭ್ಯಾಸದಲ್ಲಿ ತೊಡಗಬೇಕು. ಕಠಿಣ ಪರಿಶ್ರಮ, ತಾಳ್ಮೆ ಅವಶ್ಯಕವಾದುದು. ಇವುಗಳನ್ನು ಸಾಧಿಸಿದ್ದೆ ಆದಲ್ಲಿ ಆತ ಯಶಸ್ಸು ಸಾಧಿಸಬಹುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಮೈಸೂರು ವಿಶ್ವವಿದ್ಯಾಲಯದ ಪಿ.ಎಂ.ಇ ಬೋರ್ಡ್ ನಿರ್ದೇಶಕ ಪ್ರೊ.ಎನ್.ನಾಗರಾಜ್, ಮೈಸೂರು ವಿಶ್ವವಿದ್ಯಾಲಯದ ಯು.ಸಿ.ಎಚ್ ಸಂಯೋಜಕಿ ಪ್ರೊ.ಹಂಸವೇಣಿ, ಮೈಸೂರು ವಿಶ್ವವಿದ್ಯಾಲಯದ ಸ್ಪರ್ಧಾ ಕೇಂದ್ರದ ಸಂಯೋಜಕ ಡಾ.ಸುರೇಶ್, ಯುವರಾಜ ಕಾಲೇಜಿನ ಪ್ರೊ.ದೇವಿಕಾ, ನೇಗಿಲಯೋಗಿ ಟ್ರಸ್ಟ್ ಅಧ್ಯಕ್ಷ ರವಿಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net