ಸವದತ್ತಿಗೆ ನಿರಂತರ ಶುದ್ಧ ನೀರು ಪೂರೈಕೆ

17Savadatti1
Published on

ಸವದತ್ತಿ: ಪಟ್ಟಣದ ಯಲ್ಲಮ್ಮ ಪುರಸಭೆ 2026ಕ್ಕೆ 150 ವರ್ಷ ಪೂರೈಸಲಿದ್ದು, ನಗರಸಭೆಯಾಗಿಸಿ ಸಂಭ್ರಮಾಚರಣೆ ಮಾಡೋಣ ಎಂದು ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದರು.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಶನಿವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಒಳಚರಂಡಿ ಯೋಜನೆಗೆ 124 ಕೋಟಿ ರೂ. ಅನುದಾನಕ್ಕೆ ಅನುಮೋದನೆ ದೊರೆತಿದೆ. ಮೊದಲನೇ ಹಂತದಲ್ಲಿ 41 ಕೋಟಿ ರೂ. ಬಿಡುಗಡೆಯಾಗಿದ್ದು, ಒಳಚರಂಡಿ ಪೂರ್ಣಗೊಳಿಸಿ ರಸ್ತೆಗಳ ಅಭಿವೃದ್ಧಿಗೆ ವೇಗ ನೀಡಲಾಗುವುದು. ಪಟ್ಟಣದ ಜನರಿಗೆ 24ಗಿ7 ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಲಾಗಿದ್ದು, 3.5 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಿಸಲಾಗಿದೆ. ಶೀಘ್ರ ಅಲ್ಪಸಂಖ್ಯಾತರ ಕಾಲನಿಗಳನ್ನು ಅಭಿವೃದ್ಧಿಪಡಿಸಲಾಗುವುದು.

ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಎಪಿಎಂಸಿಯಿಂದ ಹನುಮಾನ ಮಂದಿರವರೆಗೆ 16 ಕೋಟಿ ರೂ. ವೆಚ್ಚದಲ್ಲಿ ಮುಖ್ಯರಸ್ತೆ ಅಭಿವೃದ್ಧಿಪಡಿಸಲಾಗುತ್ತಿದ್ದು, 5 ಕೋಟಿ ರೂ. ವೆಚ್ಚದಲ್ಲಿ ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ದನದ ಮಾರುಕಟ್ಟೆ ಹತ್ತಿರದ 6 ಕೋಟಿ ವೆಚ್ಚದಲ್ಲಿ ಹೈಟೆಕ್ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುವುದು. ಟ್ರಾಫಿಕ್ ನಿಯಂತ್ರಿಸಲು ಕ್ರಮ ವಹಿಸಲಾಗುವುದು. ಎಪಿಎಂಸಿ, ಸಿಂಗಾರಗೊಪ್ಪ ರಸ್ತೆ ಹತ್ತಿರದ ಸ್ಮಶಾನಗಳ ಅಭಿವೃದ್ಧಿಗೆ ತಲಾ 50 ಲಕ್ಷ ರೂ. ಅನುದಾನ ನೀಡಲಾಗಿದ್ದು, ಇನ್ನೂ 2 ಕೋಟಿ ರೂ. ಮೀಸಲಿದೆ ಎಂದು ಹೇಳಿದರು.

ರಾಮಾಪುರ ಸೈಟ್‌ನಲ್ಲಿ 3 ರಸ್ತೆ ಅಭಿವೃದ್ಧಿಯಾಗಿಲ್ಲ ಎಂದು ಮಾಜಿ ಉಪಾಧ್ಯಕ್ಷೆ ದಾವಲಬಿ ಸನದಿ ಬೇಸರ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿ ಸಂಗನಬಸಯ್ಯ ಮಾತನಾಡಿ, ಸಿಟಿಎಸ್ ಪ್ರಕಾರ ಅತಿಕ್ರಮಣ ತೆರವು ಕಾರ್ಯ ನಡೆಸಲಾಗುವುದು ಎಂದರು. ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಉಪಾಧ್ಯಕ್ಷೆ ಕೌಶಲ್ಯ ಮೋಟೇಕರ, ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ಮನವಳ್ಳಿ, ರಾಜಶೇಖರ ಕಾರದಗಿ, ಶಿವಾನಂದ ಹೂಗಾರ, ಬಾಪೂ ಚೂರಿಖಾನ, ಮೌಲಾಸಾಬ ತಬ್ಬಲಜಿ, ಜೆಇ ಶಂಕರ ದಂಡಿನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net