

ಪಡುಬಿದ್ರಿ: ಸಮಗ್ರ ಜೀರ್ಣೋದ್ಧಾರ ಸಂಕಲ್ಪಗಳಿಗೆ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಅಖಂಡ ಭಜನಾ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.
ನಿರಂತರ ಭಜನಾ ಕಾರ್ಯಕ್ರಮ 324ನೇ ದಿನಕ್ಕೆ ಪ್ರವೇಶಿಸಿದ್ದು, ದೇವರ ಬಾಲಾಲಯ ಪ್ರತಿಷ್ಠಾಪನೆ ಮುನ್ನಾದಿನ ಬುಧವಾರ ಸೂರ್ಯೋದಯದ ವೇಳೆಗೆ ಪಡುಬಿದ್ರಿ ಶಿವಳ್ಳಿ ಬ್ರಾಹ್ಮಣ ಯುವಕ ವೃಂದದ ಭಜನೆಯೊಂದಿಗೆ ದೇವರ ಸನ್ನಿಧಾನದಿಂದ ಹೊರಟಿದ್ದ ದೀಪವನ್ನು ಶ್ರೀಕ್ಷೇತ್ರದ ತಂತ್ರಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ದೇಗುಲ ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಬೆಂಗಳೂರು, ಕಾರ್ಯನಿರ್ವಹಣಾಧಿಕಾರಿ ಕೆ.ರಾಜಗೋಪಾಲ ಉಪಾಧ್ಯಾಯ, ದೇವಸ್ಥಾನ ಅರ್ಚಕರಾದ ಪದ್ಮನಾಭ ಭಟ್ ಹೆಜಮಾಡಿ ಹಾಗೂ ವೈ.ಗುರುರಾಜ ಭಟ್ ಚಾಲನೆ ನೀಡಿದರು. ವಿಶ್ವಹಿಂದು ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ನವಶಕ್ತಿ ಮಹಿಳಾ ಭಜನ ಮಂಡಳಿ ಅಧ್ಯಕ್ಷೆ ಸುಧಾ ಆರ್.ನಾವಡ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ನಡ್ಸಾಲುಗುತ್ತು, ಮೊದಲ ಭಜನಾ ಕಾರ್ಯಕ್ರಮ ನಡೆಸಿದ ತಂಡದ ವೈ.ಸುರೇಶ್ ರಾವ್, ನಟರಾಜ ಪಿ.ಎಸ್. ಮತ್ತಿತರರಿದ್ದರು.
ವಿವಿಧ ಧಾರ್ಮಿಕ ವಿಧಿಗಳ ಅಂಗವಾಗಿ ಏ.2ರಂದು ದೇಗುಲದಲ್ಲಿ ಪೂರ್ಣ ಮೃತ್ಯುಂಜಯ ಹೋಮ ತಂತ್ರಿಗಳಾದ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಅವರ ಪ್ರಧಾನ ಪೌರೋಹಿತ್ಯದಲ್ಲಿ ಶಿವರಾಜ್ ಉಪಾಧ್ಯಾಯ ಹಾಗೂ ಇತರ ಋತ್ವಿಜರು ನಡೆಸಿದರು. ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಹೋಟೆಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಭೇಟಿ ನೀಡಿದರು.