

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶದ ಕಾನೂನು ಕ್ಷೇತ್ರಕ್ಕೆ ಅತ್ಯುನ್ನತ ದಿಗ್ಗಜರನ್ನು ಕೊಡುಗೆಯಾಗಿ ನೀಡಿರುವ ಸರ್ ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ಭವ್ಯ ಪರಂಪರೆಯನ್ನು ಇಂದಿನ ವಿದ್ಯಾರ್ಥಿಗಳು ಮುಂದುವರೆಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಕ -ಶಿಕ್ಷಕೇತರ ವ್ಯಕ್ತಿಗಳ ಶಿಸ್ತು, ಶ್ರದ್ಧೆಗಳಿಂದ ಕಾಲೇಜು ದಕ್ಷಿಣ ಭಾರತದಲ್ಲೇ ಹೆಸರಾಂತ ಕಾನೂನು ಕಾಲೇಜು ಎಂದು ಹೆಸರಾಗಿದೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳನ್ನು, ಸಿವಿಲ್ ಹಾಗೂ ಜಿಲ್ಲಾ ನ್ಯಾಯಾಧೀಶರು, ಕಾನೂನು ತಜ್ಞರನ್ನು, ಉತ್ತಮ ವಕೀಲರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ನಾನು ಈ ಕಾಲೇಜಿನ ಹಿಂದಿನ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಈಗಿನ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರ ಪರಿಶ್ರಮದಿಂದ ಮತ್ತದೇ ಭವ್ಯ ಪರಂಪರೆ ಮುಂದುವರೆಸುವತ್ತ ದಾಪುಗಾಲು ಹಾಕುತ್ತಿದೆ ಎಂದರು.
ಕಾಲೇಜು ಗ್ರಂಥಾಲಯವು ಅತ್ಯುನ್ನತ ದರ್ಜೆಯ ಗ್ರಂಥ ಭಂಡಾರವನ್ನು ಹೊಂದಿದ್ದು, ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಧನ್ಯರು. ನೀವೆಲ್ಲರೂ ಕಾನೂನು ಕ್ಷೇತ್ರದಲ್ಲಿ ಭವಿಷ್ಯದ ಮಿನುಗು ತಾರೆಗಳಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ. ಮಂಜುಳಾ ಎಸ್.ಆರ್ ಮಾತನಾಡಿ, ಈಗಿನ ಸ್ಪರ್ಧಾತ್ಮಕ ಯುಗಕ್ಕೆ ಪೂರಕವಾಗಿ ಎಲ್ಲ ರೀತಿಯ ಅನುಕೂಲಗಳನ್ನು ಕಾನೂನು ವಿದ್ಯಾರ್ಥಿಗಳಿಗೆ ಕಲ್ಪಿಸಲಾಗುತ್ತಿದೆ ಎಂದರು.
ಪ್ರೊ. ಎಂ.ಎ. ಶಿವುಕುಮಾರ, ಜಿಮಖಾನ ಪ್ರತಿನಿಧಿ ಸಾಧಿಕ್ ಹೊಟೆಗಾಳಿ, ವೈಷ್ಣವಿ ಹಿರೇಮಠ, ಡಾ. ಆರ್. ಎಂ. ಕಾಂಬಳೆ, ಕೆ. ಎಸ್. ಕೋರಿಶೆಟ್ಟರ, ಇತರರು ಇದ್ದರು.
ಡಾ. ಶಶಿರೇಖಾ ಮಾಳಗಿ ಸ್ವಾಗತಿಸಿದರು. ಅಂಕಿತಾ ತಳವಾರ ವಂದಿಸಿದರು.