ನಗರಸಭೆ ಸದಸ್ಯರಾಗಿ ಮುಂದುವರಿಕೆ, ಸರ್ಕಾರದಿಂದ ಆದೇಶ ನೆಲಮಂಗಲ ಪುರಸಭೆ ಮೇಲ್ದರ್ಜೆಗೆ

04 Nela Ph 01 City Municipal Office
Published on

ಸುಗ್ಗರಾಜು ಜಿ.ಕೆ. ನೆಲಮಂಗಲ

2019ರ ಪುರಸಭೆ ಚುನಾವಣೆಯಲ್ಲಿ ಚುನಾಯಿತರಾಗಿದ್ದ ಸದಸ್ಯರನ್ನೇ ನಗರಸಭಾ ಸದಸ್ಯರಾಗಿ ಸರ್ಕಾರ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದ್ದು, ಸದಸ್ಯರಲ್ಲಿದ್ದ ಆತಂಕ ದೂರವಾಗಿದೆ.

2019 ಜೂ.1 ರಂದು ಪುರಸಭೆಯ 23 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 23 ಸ್ಥಾನಗಳ ಪೈಕಿ 13 ಜೆಡಿಎಸ್, 7 ಕಾಂಗ್ರೆಸ್, 2 ಬಿಜೆಪಿ 1 ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅದಾದ ಬಳಿಕ ರಚನೆಯಾದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತೆ ನಗರಸಭೆ ಮೇಲ್ದರ್ಜೆ ವಿಚಾರವನ್ನು ರಾಜ್ಯಪಾಲರ ಮುಂದಿಟ್ಟು ಅಂಗೀಕಾರ ಪಡೆದುಕೊಂಡಿದ್ದು, ನಗರಾಭಿವೃದ್ಧಿ ಸಚಿವಾಲಯ 2019 ಡಿ.26 ರಂದು ಅಧಿಸೂಚನೆ ಹೊರಡಿಸಿತ್ತು. ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದರ ನಡುವೆ ಮಾರ್ಚ್‌ನಲ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಿದ್ದು, ಚುನಾಯಿತರು ಮತ್ತು ನಾಗರಿಕರಲ್ಲಿ ಗೊಂದಲಕ್ಕೆಡೆಮಾಡಿಕೊಟ್ಟಿತ್ತು.

ನ್ಯಾಯಾಲಯ ಮೆಟ್ಟಿಲೇರಿದ್ದ ಆಕಾಂಕ್ಷಿಗಳು: ಮತ್ತೊಂದೆಡೆ 2019 ಪುರಸಭೆ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳು ಹಾಗೂ ಮುಂಬರುವ ನಗರಸಭೆಗೆ ವಿಲೀನಗೊಂಡಿರುವ ಗ್ರಾಮಪಂಚಾಯಿತಿಗಳ ಕೆಲ ಸದಸ್ಯರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ೋಷಣೆಯಾಗಿದ್ದ ಚುನಾವಣೆ ತಡೆಯುವ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಚುನಾಯಿತ ಸದಸ್ಯರಲ್ಲಿ ಆತಂಕ ಸೃಷ್ಟಿಯಾಗಿತ್ತು.

ಉದ್ಭವಿಸಿದ್ದ ಅಸ್ತಿತ್ವದ ಪ್ರಶ್ನೆ: ನಗರಸಭೆಗೆ ವಿಲೀನಗೊಂಡಿರುವ ಗ್ರಾಮಪಂಚಾಯಿತಿಗಳ ದಾಖಲೆಗಳ ಹಸ್ತಾಂತರ, ಗಡಿ ಗುರುತು ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೂ ಅಧಿಕಾರಿಗಳ ಮೇಲೆ ಒತ್ತಡ ತಂದ ಕೆಲ ಜನಪ್ರತಿನಿಧಿಗಳು ನಗರಸಭಾ ಚುನಾವಣೆ ನಡೆಸಲು ಬೇಕಾಗಿರುವ ಕ್ಷೇತ್ರಗಳ ವಿಂಗಡಣೆ ಕಾರ್ಯಾದೇಶ ತಂದಿದ್ದು, ಚುನಾಯಿತ ಸದಸ್ಯರಲ್ಲಿ ಅಸ್ತಿತ್ವದ ಪ್ರಶ್ನೆ ಉದ್ಭವಿಸಿತ್ತು. ಆದರೀಗ ಸರ್ಕಾರ ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 361(3) ರನ್ವಯ ಮೇಲ್ದರ್ಜೆಗೇರಿಸಲಾದ ನೆಲಮಂಗಲ ನಗರಸಭೆಯ ಸದಸ್ಯರಾಗಲಿದ್ದು, ಆ ಪ್ರಕಾರ ಪುರಸಭೆ ಸದಸ್ಯರನ್ನು ನಗರಸಭೆ ಸದಸ್ಯರುಗಳೆಂದು ಪರಿಗಣಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗಳಿಗೆ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನಕಾರ್ಯದರ್ಶಿ ಆದೇಶಿಸಿರುವುದು ಚುನಾಯಿತರಲ್ಲಿ ಸಂತೋಷ ತಂದಿದೆ.

ನಾಮನಿರ್ದೇಶನ ಸದಸ್ಯರ ನೇಮಕ: ನಗರಸಭೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ 4 ಗ್ರಾಮಪಂಚಾಯಿತಿಗಳ ಜನಸಂಖ್ಯೆ ಸುಮಾರು 47,161 ಇರುವುದರಿಂದ ವಿಲೀನಗೊಂಡ ಪ್ರದೇಶವನ್ನು ಪ್ರತಿನಿಧಿಸುವುದಕ್ಕೆ ಹೆಚ್ಚುವರಿ ಸದಸ್ಯರನ್ನು ಸರ್ಕಾರ ನಾಮನಿರ್ದೇಶನ ಮಾಡಬೇಕಾಗಿದೆ. ಅದಕ್ಕೆ ಸದಸ್ಯರ ವಿವರಗಳನ್ನು ಆದಷ್ಟು ಬೇಗ ಸಂಬಂಧ ಪಟ್ಟವರಿಗೆ ಒದಗಿಸುವಂತೆ ನಗರಾಭಿವೃದ್ಧಿ ಇಲಾಖೆ ಆದೇಶಿಸಿದೆ.

ಪುರಸಭೆ ಸದಸ್ಯರನ್ನೆ ನಗರಸಭೆ ಮೇಲ್ದರ್ಜೆಗೇರಿಸಿರುವ ಸರ್ಕಾರದ ಈ ಕ್ರಮ ಚುನಾಯಿತರಲ್ಲಿ ಸಂತೋಷ ತಂದಿದೆ. ಪ್ರಜಾಪ್ರಭುತ್ವವನ್ನು ಎತ್ತಿಹಿಡಿದಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು. ಆದರೆ ಆದಷ್ಟು ಬೇಗ ನಾಮನಿರ್ದೇಶಿತರ ನೇಮಕ ಕುರಿತಾಗಿ ಸ್ಪಷ್ಟ ಮಾರ್ಗಸೂಚಿ ನೀಡುವಂತೆ ಮನವಿ ಮಾಡಲಾಗುತ್ತಿದೆ. ಎನ್.ಗಣೇಶ್, ಸದಸ್ಯ, ನಗರಸಭೆ ಪ್ರಸ್ತುತ ಕೊರೊನಾದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ಒಳ್ಳೆಯ ತೀರ್ಮಾನ ತಗೆದುಕೊಂಡಿದೆ. ಇದರಿಂದ ಆರ್ಥಿಕ ನಷ್ಟವೂ ತಪ್ಪಲಿದೆ. ನಗರಸಭೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರೂ ಶ್ರಮಿಸಬೇಕು. ಕೆ.ಎಂ.ಶಿವಕುಮಾರ್, ಸದಸ್ಯ, ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net