ಕೆಎಚ್‌ಬಿ ನಿಲುವು ಬದಲಿಸುವವರೆಗೂ ನಿರಂತರ ಹೋರಾಟ

21arsph1ep
ಭೂ ಸ್ವಾಧೀನ ವಿರೋಧಿಸಿ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಎನ್.ಆರ್.ಸಂತೋಷ್ ಮಾತನಾಡಿದರು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ಡಿವೈಎಸ್‌ಪಿ ಲೋಕೇಶ್, ಪುಟ್ಟಸ್ವಾಮಿ, ದಯನಂದ್, ರವಿಕಿರಣ್ ಇತರರಿದ್ದರು.
Published on

ಅರಸೀಕೆರೆ: ಉಪನಗರ ನಿರ್ಮಾಣದ ಹೆಸರಿನಲ್ಲಿ ಅನ್ನದಾತರ ಒಕ್ಕಲೆಬ್ಬಿಸಲು ಮುಂದಾಗಿರುವ ಕರ್ನಾಟಕ ಗೃಹಮಂಡಳಿ ತನ್ನ ನಿಲುವು ಬದಲಿಸುವವರೆಗೂ ನಿರಂತರ ಹೋರಾಟ ನಡೆಸುತ್ತೇವೆ ಎಂದು ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಘೋಷಿಸಿದರು.

ತಾಲೂಕು ಕಚೇರಿ ಅವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿ, ಸೂಳೆಕೆರೆ, ಪನ್ನಸಮುದ್ರ ಹಾಗೂ ಲಕ್ಷ್ಮೀದೇವರಹಳ್ಳಿ ಗ್ರಾಮಗಳ ಆಸುಪಾಸಿನಲ್ಲಿ ಫಲವತ್ತಾದ ನೂರಾರು ಎಕರೆ ಕೃಷಿ ಭೂಮಿ ವಶಕ್ಕೆ ಪಡೆಯಲು ಗೃಹಮಂಡಳಿ ಹುನ್ನಾರ ನಡೆಸಿರುವುದು ಜಗಜ್ಜಾಹಿರಾಗಿದೆ. ಭೂ ಮಾಫಿಯಾ ಜತೆ ಶಾಮೀಲಾಗಿರುವ ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ತಮ್ಮ ಬೆಂಬಲಿಗರನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿ ರೈತರ ಭೂಮಿ ಲಪಟಾಯಿಸಲು ಜಾಲ ಹೆಣೆದಿದ್ದಾರೆ. ರೈತರನ್ನು ಮನೆಗೆ ಕರೆಯಿಸಿ ಎಕರೆಗೆ 15 ಲಕ್ಷ ರೂ. ಕೊಡಲು ನಿರ್ಧರಿಸಿದ್ದು ಮನಸ್ಸು ಮಾಡಬೇಕು. ಭೂಮಿ ಬಿಟ್ಟುಕೊಡದಿದ್ದರೆ ಹೇಗೆ ತೆಗೆದುಕೊಳ್ಳಬೇಕೆಂಬುದು ಗೊತ್ತಿದೆ. ಬಿಡಿಗಾಸಿನ ಪರಿಹಾರ ಸಿಗುವುದಿಲ್ಲ ಎಂದು ಧಮಕಿ ಹಾಕಿರುವುದು ಅಕ್ಷಮ್ಯ. ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಏಳೆಂಟು ಕೋಟಿ ರೂ. ಹಣ ಹಂಚಬೇಕು ಎನ್ನುವ ಸಂದೇಶ ಬಹಿರಂಗವಾಗಿದೆ. ಇಷ್ಟು ಪ್ರಮಾಣದ ದುಡ್ಡು ರಿಯಲ್ ಎಸ್ಟೇಟ್‌ನಿಂದ ಮಾತ್ರವೇ ಹರಿದುಬರಲು ಸಾಧ್ಯವಿದೆ. ಮೂರೂ ಗ್ರಾಮಗಳ ಸರಹದ್ದಿನಲ್ಲಿ ಉಪ ನಗರ ನಿರ್ಮಿಸುವ ಉದ್ದೇಶ ಕೂಡಲೇ ಕೈ ಬಿಡಬೇಕು. ಅಕ್ರಮ ಹಣ ಹಂಚಿಕೆಯಲ್ಲಿ ಭಾಗಿಯಾಗಿರುವ ಕೆ.ಎಂ.ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶಿಸುವ ಜತೆಗೆ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ಚತುಷ್ಪಥ ಹೆದ್ದಾರಿ ನಿರ್ಮಾಣ ವೇಳೆ ಭೂಮಿ ಕಳೆದುಕೊಂಡಿರುವ ಬೆಂಡೇಕೆರೆ ಗ್ರಾಮದ ರೈತರಿಗೆ ನ್ಯಾಯಯುತ ಪರಿಹಾರ ನೀಡುವಲ್ಲಿ ಜಿಲ್ಲಾಧಿಕಾರಿ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಅಂದಿನ ಸಂಸದ ಪ್ರಜ್ವಲ್ ರೇವಣ್ಣ ಸಮ್ಮುಖದಲ್ಲಿ ತೆಗೆದುಕೊಂಡ ತೀರ್ಮಾನದಂತೆ ಭೂ ಪರಿಹಾರ ನೀಡಬೇಕು. ನಮ್ಮ ಹೋರಾಟ ನಿರಂತರವಾಗಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಪಕ್ಷದ ಮುಖಂಡರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಬಿಜೆಪಿ ರೈತಮೋರ್ಚಾ ಮುಖಂಡ ಗೀಜಿಹಳ್ಳಿ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ನಗರದ ಸುತ್ತಮುತ್ತ ಬೇನಾಮಿ ಜಮೀನು ಖರೀದಿ ದಂಧೆ ನಿರಂತರವಾಗಿ ನಡೆದಿದೆ. ಮೈಸೂರು ರಸ್ತೆಗೆ ಹೊಂದಿಕೊಂಡಂತಿರುವ ಗೃಹಮಂಡಳಿ ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಭೂಮಿ ವಶಕ್ಕೆ ಪಡೆದು ಉಪನಗರ ನಿರ್ಮಿಸಲಿ. ಅದನ್ನು ಬಿಟ್ಟು ಬಡವರ ಕೃಷಿ ಜಮೀನಿಗೆ ಕಣ್ಣು ಹಾಕಿದ್ದಾರೆ ಎಂದು ಕಿಡಿಕಾರಿದರು.

ತಾಪಂ ಮಜಿ ಸದಸ್ಯ ಭೋಜಾನಾಯ್ಕ, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಜಯದೇವ್ ಮಾತನಾಡಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ರೈತರು ರಕ್ತ ಕೊಟ್ಟರೂ ಸರಿ ಭೂಮಿ ಕೊಡುವುದಿಲ್ಲ. ನ್ಯಾಯಯುತ ಬೇಡಿಕೆ ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನಯೇ ಇಲ್ಲ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ಮನವಿ ಸ್ವೀಕರಿಸಿ ಸಮಾಧನಪಡಿಸಲು ಯತ್ನಿಸಿದರೂ ಯಾವುದೇ ಪ್ರಯೊಜನವಾಗಲಿಲ್ಲ. ಸಂಜೆವರೆಗೂ ಪ್ರತಿಭಟನೆ ಮುಂದುವರಿದು ಬಳಿಕ ಅಂತ್ಯಗೊಂಡಿತು.

ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ರೈತಮುಖಂಡ ದಯಾನಂದ್, ಮುಖಂಡರಾದ ಉಮೇಶ್, ಡಾಬಾ ರಘು, ಮಾದನಹಳ್ಳಿ ನಾಗರಾಜ್, ನಗರಸಭೆ ಮಾಜಿ ಸದಸ್ಯ ರಂಗನಾಥ್, ಶಿವನ್‌ರಾಜ್, ಓಂಕಾರಮೂರ್ತಿ, ಬೆಳಗುಂಬ ಚಂದು, ಗಗನ್, ಲೋಕೇಶ್, ಕಾಟೀಕೆರೆ ಮೋಹನ್, ಸೂಳೆಕೆರೆ ಪ್ರಭಣ್ಣ ಸೇರಿದಮತೆ ಬೆಂಡೇಕೆರೆ, ಸೂಳೆಕೆರೆ, ಪನ್ನಸಮುದ್ರ ಹಾಗೂ ಲಕ್ಷ್ಮೀದೇವರಹಳ್ಳಿ ಗ್ರಾಮದ ರೈತರು ಸ್ವಯಂಪ್ರೇರಿತರಾಗಿ ಪಾಲ್ಗೊಂಡಿದ್ದರು. ಹೋರಾಟಕ್ಕೆ ಮನ್ನಣೆ ದೊರೆಯದಿದ್ದರೆ, ಎತ್ತು, ಆಡು, ಕುರಿ ಹಾಗೂ ಕುಟುಂಬ ಸದಸ್ಯರ ಜತೆ ಮೊಕ್ಕಾಂ ಹೂಡುವುದಾಗಿ ರೈತರು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net