

ಕೊಳ್ಳೇಗಾಲ: ಸಾರ್ವಜನಿಕ ಸ್ಥಳಗಳಲ್ಲಿ ಜಾನುವಾರುಗಳನ್ನು ಬಿಡುವವರಿಗೆ ದಂಡ ವಿಧಿಸುತ್ತಿದ್ದರೂ ಬುಧವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಮುಂದುವರಿದಿದೆ.
ಸಾರ್ವಜನಿಕ ರಸ್ತೆ ಹಾಗೂ ಸ್ಥಳಗಳಲ್ಲಿ ಬಿಡಾಡಿದ ದನಗಳನ್ನು ಬಿಡುತ್ತಿರುವುದ್ದರಿಂದ ಸಾರ್ವಜನಿಕರಿಗೆ ಬಹಳ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜು.7 ರಂದು ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಅವರು, ನಗರಸಭೆ ಅಧಿಕಾರಿಗಳ ಜತೆ ಸಭೆ ನಡೆಸಿ ಬಿಡಾಡಿ ದನಗಳನ್ನು ಪಿಂಜ್ರಾಪೋಲ್‌ಗೆ ಬಿಡುವಂತೆ ಸೂಚನೆ ನೀಡಿದ್ದರು. ಅಂತೆಯೇ ಮಂಗಳವಾರ ನಗರಸಭೆ ಹೆಲ್ತ್ ಇನ್‌ಸ್ಪೆಕ್ಟರ್ ಚೇತನ್ ನೇತೃತ್ವದಲ್ಲಿ ಪಟ್ಟಣದಾದ್ಯಂತ ಬಿಡಾಡಿ ದನಗಳ ಸೆರೆ ಕಾರ್ಯಾಚರಣೆ ನಡೆಸಲಾಗಿದ್ದು. ಸಾರ್ವಜನಿಕ ಸ್ಥಳದಲ್ಲಿ ದೊರೆತ 7 ಹಸುಗಳಿಗೆ ತಲಾ 5 ಸಾವಿರ ರೂ. ದಂತೆ ಹಸುವಿನ ಮಾಲೀಕರಿಗೆ ದಂಡ ವಿಧಿಸಿದ್ದರು.
ನಗರಸಭೆ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ನಗರಸಭೆ ಪೌರಾಯುಕ್ತರು ಸಾರ್ವಜನಿಕ ಸ್ಥಳಗಳಿಗೆ ಬಿಡಾಡಿ ದನಗಳು ದೊರೆತರೆ ನೇರವಾಗಿ ಪಿಂಜ್ರಾಪೋಲ್‌ಗೆ ಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ. ಆದರೂ ಬುಧವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಿಂಡುಹಿಂಡಾಗಿ ದನಗಳು ಸಂಚರಿಸುತ್ತ ವಾಹನ ಸವಾರರಿಗೆ ತೊಂದರೆ ನೀಡುತ್ತಿರುವುದು ಕಂಡು ಬಂದಿದೆ.
ನಗರಸಭೆಯ ಬಿಡಾಡಿ ದನಗಳ ಸೆರೆ ಕಾರ್ಯಾಚರಣೆ ಒಂದೇ ದಿನಕ್ಕೆ ಸಿಮೀತವಾಯಿತೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಈ ಬಗ್ಗೆ ಜಾನುವಾರು ಮಾಲೀಕರಿಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಿಗೆ ದನಗಳನ್ನು ಬಿಡದಂತೆ ಕ್ರಮ ವಹಿಸಬೇಕಿದೆ.