ನಾಡಪ್ರಭು ಬಂಧಿಯಾಗಿದ್ದ ಸೆರೆಮನೆ ಪತ್ತೆ

KEMPEGOWDA
ನಾಡಪ್ರಭು ಕೆಂಪೇಗೌಡರನ್ನು ಬಂಧನದಲ್ಲಿಟ್ಟಿದ್ದ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಪತ್ತೆಯಾಗಿರುವ ಸೆರೆಮನೆ ನೋಟ.
Published on

ಗಂಗಾವತಿ: ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರನ್ನು ಬಂಧನದಲ್ಲಿಟ್ಟಿದ್ದ ಸೆರೆಮನೆ ತಾಲೂಕಿನ ಆನೆಗೊಂದಿಯಲ್ಲಿ ಪತ್ತೆಯಾಗಿದ್ದು, ನಿರಂತರ ಶೋಧನೆ ನಂತರ ಖಚಿತವಾಗಿದೆ.

ಆನೆಗೊಂದಿ ವಾಲಿಕಿಲ್ಲಾ ಮ್ಯಾಗೋಟ ಬಳಿಯ ಜಿಂಜರ್ ಬೆಟ್ಟದಲ್ಲಿ ಹಲವು ಪ್ರಕಾರಗಳ ಸ್ಮಾರಕಗಳಿವೆ. ಇದರಲ್ಲಿ ಸೆರೆಮನೆ ಇರುವ ಬಗ್ಗೆ ಡಾ.ಶರಣಬಸಪ್ಪ ಕೋಲ್ಕಾರ್ ಸಂಶೋಧನೆ ಕೈಗೊಂಡಿದ್ದರು. ಕೆಂಪೇಗೌಡರು 1560 ರಿಂದ ಐದು ವರ್ಷಗಳ ಕಾಲ ಆನೆಗೊಂದಿ ಸೆರೆಮನೆಯಲ್ಲಿದ್ದು, 1565ರಲ್ಲಿ ಭಾರಿ ದಂಡ ತೆತ್ತು ಬಿಡುಗಡೆಗೊಂಡಿದ್ದರು.

ಈ ಬಗ್ಗೆ ಮೈಸೂರ್ ಗ್ಯಾಜೆಟಿಯರ್ (1997)ನಲ್ಲಿ ಉಲ್ಲೇಖವಿದೆ. ಸಾಂದರ್ಭಿಕ ಸನ್ನಿವೇಶ ಅನುಲಕ್ಷಿಸಿ ಆನೆಗೊಂದಿ ಒಂಟಿ ಸಾಲು ಮತ್ತು ಆನೆ ಸಾಲು ಎಂಬ ಕಟ್ಟಡವೇ ಆನೆಗೊಂದಿ ಸೆರೆಮನೆ ಇರಬೇಕೆಂದು ಅಂದಾಜಿಸಿದ್ದರು. ಆದರೆ, ಆನೆಗೊಂದಿಯಲ್ಲಿ ಪ್ರಚಲಿತದಲ್ಲಿರುವ ಮೌಖಿಕ ಹೇಳಿಕೆಗಳ ಪ್ರಕಾರ ಕೆಂಪೇಗೌಡರು ಜಿಂಜರ್ ಬೆಟ್ಟದಲ್ಲಿ ಬಂಧನದಲ್ಲಿದ್ದರೆಂಬುದು ಸಂಶೋಧನೆಯಿಂದ ಗೊತ್ತಾಗಿತ್ತು.

ಜಿಂಜರ್ ಬೆಟ್ಟದ ಅಮೂಲಾಗ್ರ ಪರಿಶೋಧನೆ ನಡೆಸಿದಾಗ ಬೆಟ್ಟದ ಮೇಲೆ ರಕ್ಷಣಾ ಗೋಡೆಗಳು, ಕಾವಲು ಗೋಪುರಗಳು, ಕಾವಲುಗಾರರ ಮನೆಗಳು, ಸೈನಿಕರ ವಸತಿಗಳು, ಭದ್ರತಾ ಕಟ್ಟಡ (ಸೆರೆಮನೆ), ಕಣಜ ಮತ್ತು ನೈಸರ್ಗಿಕ ನೀರಿನ ಕೊಳಗಳಿವೆ. ಬೆಟ್ಟ ಅಂದಾಜು 400 ಮೀಟರ್ ಎತ್ತರವಿದ್ದು, ಮೇಲಿನ ಸ್ಥಳ ಗೌಪ್ಯವಾಗಿದೆ. ಕೆಳಗಿನಿಂದ ನೋಡಿದರೆ ಮೇಲ್ಭಾಗದಲ್ಲಿ ಈ ಎಲ್ಲ ಕಟ್ಟಡಗಳಿವೆ ಎಂದು ತಿಳಿಯುವುದೇ ಇಲ್ಲ. ಹಾಗಾಗಿ ಈ ಎಲ್ಲ ಕಟ್ಟಡದ ಅವಶೇಷಗಳು ಸೆರೆಮನೆ ಎಂಬುದು ಬಿಂಬಿಸುತ್ತವೆ. ಮೌಖಿಕ ಪರಂಪರೆ ಮತ್ತು ಕಟ್ಟಡಗಳ ಸಾಂದರ್ಭಿಕ ಸನ್ನಿವೇಶ ಅನುಲಕ್ಷಿಸಿ, ಆನೆಗೊಂದಿಯ ಜಿಂಜರ್ ಬೆಟ್ಟದ ಈ ಕಟ್ಟಡಗಳೇ ಕೆಂಪೇಗೌಡರು ಬಂಧನದಲ್ಲಿದ್ದ ವಿಜಯನಗರ ಕಾಲದ ಸೆರೆಮನೆ ಎಂದು ಖಚಿತಪಡಿಸಲಾಗಿದೆ.

ವಿಜಯನಗರ ಸಾಮ್ರಾಜ್ಯದ ನಿಷ್ಠಾವಂತ ಮಾಂಡಲಿಕ ಯಲಹಂಕ ನಾಡಪ್ರಭು ಕೆಂಪೇಗೌಡರು, ಅಳಿಯ ರಾಮರಾಯನ ಕಾಲದಲ್ಲಿ ರಾಜ್ಯದಲ್ಲಿ ಉಂಟಾದ ಆರ್ಥಿಕ ದುಸ್ಥಿತಿ ಸುಧಾರಣೆ ಮತ್ತು ಪ್ರಜೆಗಳ ಹಿತಕ್ಕಾಗಿ ಭೈರೇಶ್ವರ ಹೆಸರಿನ ಸ್ವಂತ ನಾಣ್ಯ ಚಲಾಯಿಸಿದ್ದರು. ಇದರಿಂದ ಕೆರಳಿದ ಅಳಿಯ ರಾಮರಾಯರು ಕೆಂಪೇಗೌಡರನ್ನು ರಾಜಧಾನಿ ವಿಜಯನಗರದಲ್ಲಿ ಜರುಗುತ್ತಿದ್ದ ದಸರಾ ಉತ್ಸವಕ್ಕೆ ಆಹ್ವಾನಿಸಿ, ಅವರನ್ನು ಬಂಧಿಸಿ ಆನೆಗೊಂದಿ ಸೆರೆಮನೆಯಲ್ಲಿದ್ದರು. ಈ ಬಗ್ಗೆ ರಾಜ್ಯ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯು ಹಂಪಿ ಉತ್ಸವ ಸಂದರ್ಭ ನಡೆಸಿದ ವಿಜಯನಗರ ಅಧ್ಯಯನ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಲಾಗಿದೆ.ಡಾ.ಶರಣಬಸಪ್ಪ ಕೋಲ್ಕಾರ್ ಸಂಶೋಧಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net