

ಬೆಳಗಾವಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ 36 ಸೇತುವೆ ಮುಳುಗಡೆಯಾಗಿವೆ. ನಗರದ ಹಿಂದವಾಡಿಯಲ್ಲಿ ರಿಯಾ ಜಿಗಜಿನ್ನಿ ಎಂಬುವರ ಮನೆ ಗುರುವಾರ ರಾತ್ರಿ ಕುಸಿದು ಬಿದ್ದಿದೆ. ಟೆಂಗಿನಕೇರಿ ಗಲ್ಲಿಯ ಮನೆಗಳಿಗೆ ನೀರು ನುಗ್ಗಿದೆ. ಶುಕ್ರವಾರ ಬೆಳಗ್ಗೆ ಕೊಂಚ ಬಿಡುವು ಕೊಟ್ಟಿತಾದರೂ ಮತ್ತೆ ರಭಸದಿಂದ ಮಳೆ ಸುರಿಯಿತು. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿರುವುದರಿಂದ ಜಿಲ್ಲೆಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಪ್ರವಾಹ ಸ್ಥಿತಿ ನಿರ್ಮಾಣವಾದರೆ ನಿಭಾಯಿಸಲು ಮುಖ್ಯಮಂತ್ರಿ ಅವರ ಕಾರ್ಯಾಲಯ, ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಕೊಲ್ಲಾಪುರ ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಅರ್ಧಗಂಟೆಗಳ ಕಾಲ ಚರ್ಚಿಸಿ ಮಾಹಿತಿ ಪಡೆದಿದ್ದಾರೆ.
ಮಹಾರಾಷ್ಟ್ರದ ಕೊಯ್ನ ಜಲಾಶಯದಿಂದ ನೀರು ಬಿಡುಗಡೆಯಾಗುವ ಕುರಿತು ಅಲ್ಲಿ ನೇಮಿಸಲಾದ ಕರ್ನಾಟಕದ ಅಧಿಕಾರಿಗಳು ಮತ್ತು ಮಹಾರಾಷ್ಟ್ರದ ಅಧಿಕಾರಿಗಳಿಂದ ಅರ್ಧಗಂಟೆಗೊಮ್ಮೆ ಮಾಹಿತಿ ಪಡೆಯಲಾಗುತ್ತಿದೆ. ರಾಜಾಪುರ ಬ್ಯಾರೇಜ್‌ನಿಂದ 1.80 ಲಕ್ಷ ಕ್ಯೂಸೆಕ್ ಮತ್ತು ದೂಧಗಂಗೆ ನದಿ ನೀರು ಸೇರಿ ಕಲ್ಲೋಳ ಬ್ಯಾರೇಜ್ ಹತ್ತಿರ 2.25 ಲಕ್ಷ ಕ್ಯೂಸೆಕ್ ನೀರು ಬರುತ್ತಿದೆ.
ಮಳೆಯಿಂದ ಉಂಟಾದ ಪರಿಸ್ಥಿತಿ ನಿಯಂತ್ರಿಸಲು ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಮೊಬೈಲ್ ಸಂಖ್ಯೆ ನೀಡಲಾಗಿದೆ. ಜಿಲ್ಲಾಡಳಿತದಿಂದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ‘ಪ್ರವಾಹ ನಿರ್ವಹಣೆ ಸಹಾಯವಾಣಿ’ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಖಾನಾಪುರ ತಾಲೂಕಿನ ಅಮಗಾಂವನಲ್ಲಿ ಮಹಿಳೆಗೆ ಸೂಕ್ತ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದ ಘಟನೆ ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಅಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಿದೆ. ಅಗತ್ಯ ಬಿದ್ದರೆ ಅಲ್ಲಿನ ಜನರನ್ನು ಸ್ಥಳಾಂತರಿಸುವುದಕ್ಕೆ ಚಿಂತನೆ ನಡೆದಿದೆ.
ಭರ್ತಿಯತ್ತ ಹಿಡಕಲ್ ಡ್ಯಾಂ:
ಘಟಪ್ರಭಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಗೋಕಾಕ ಹೊರ ವಲಯದ ಲೋಳಸೂರ ಸೇತುವೆ ಮುಳುಗಡೆಯಾಗಿದೆ. ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಗೋಕಾಕ-ಘಟಪ್ರಭಾ ಸಂಪರ್ಕಿಸುವ ಲೋಳಸೂರ ಜಲಾಶಯ ಮುಳುಗಡೆಯಾಗಿದೆ. ಪರಿಣಾಮ ಜತ್ತ-ಜಾಂಬೋಟಿ ಹೆದ್ದಾರಿ ಸೇರಿ ಗೋಕಾಕ-ಘಟಪ್ರಭಾ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.