ಮುಂದುವರಿದ ಮಳೆ, ಮನೆಗಳಿಗೆ ಹಾನಿ

Rain
Published on

ಹುಬ್ಬಳ್ಳಿ: ಕಳೆದ ನಾಲ್ಕೈದು ದಿನಗಳಂತೆ ಹುಬ್ಬಳ್ಳಿಯಲ್ಲಿ ಶುಕ್ರವಾರವೂ ಮಳೆ ಮುಂದುವರಿಯಿತು. ದಿನವಿಡಿ ಬಿಟ್ಟು-ಬಿಟ್ಟು ಜೋರಾಗಿ ಮಳೆ ಸುರಿದಿದೆ. ಕೆಲವೆಡೆ ಮನೆಗಳು ಭಾಗಶಃ ಕುಸಿದಿರುವ ಬಗ್ಗೆ ವರದಿಯಾಗಿವೆ.

ಬಮ್ಮಾಪುರ, ಎಂಟಿಸಾಗರ, ಅಮರಗೋಳ, ಗೋಪನಕೊಪ್ಪ ಹಾಗೂ ಉಣಕಲ್‌ನಲ್ಲಿ 6 ಮನೆಗಳು ಭಾಗಶಃ ಕುಸಿದು 3.10 ಲಕ್ಷ ರೂ ಹಾನಿ ಸಂಭವಿಸಿದೆ ಎಂದು ತಾಲೂಕು ಆಡಳಿತ ಅಂದಾಜಿಸಿದೆ.

ಹುಬ್ಬಳ್ಳಿ ನಗರದಲ್ಲಿ ಬಹುತೇಕ ಕಡೆ ಒಳಚರಂಡಿ ತುಂಬಿ ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಈ ಕುರಿತು ಸಾರ್ವಜನಿಕರಿಂದ ಪಾಲಿಕೆಗೆ ಹೆಚ್ಚು ದೂರುಗಳು ಬರುತ್ತಿವೆ.

ಸತತ ಮಳೆಯ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ವಲಯ ಕಚೇರಿ ಸಹಾಯಕ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತಗ್ಗು ಪ್ರದೇಶಗಳಿಗೆ ನೀರು ನುಗ್ಗದಂತೆ ಎಚ್ಚರಿಕೆ ವಹಿಸಬೇಕು, ಕಂಟ್ರೋಲ್ ರೂಂಗೆ ಬರುವ ಕರೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು, ರಜಾ ದಿನಗಳಂದು (ಶನಿವಾರ ಹಾಗೂ ಭಾನುವಾರ) ಕೇಂದ್ರ ಸ್ಥಳವನ್ನು ಬಿಟ್ಟು ಬೇರೆಡೆ ಹೋಗಬಾರದು ಎಂದು ಸೂಚಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಶಿರಗುಪ್ಪಿ ಗ್ರಾಮದಲ್ಲಿ 2 ಹಾಗೂ ಪಾಳೆಯಲ್ಲಿ 1 ಮನೆ ಕುಸಿದ್ದು ಬಿದ್ದಿದ್ದು 1.20 ಲಕ್ಷ ರೂ. ಹಾನಿ ಅಂದಾಜಿಸಲಾಗಿದೆ ಎಂದು ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net