ಮುಂದುವರಿದ ರೈಲ್ವೆ ನೌಕರರ ಪ್ರತಿಭಟನೆ

12
Published on

ಮೈಸೂರು: ಹೊಸ ಪಿಂಚಣಿ ಯೋಜನೆ(ಎನ್‌ಪಿಎಸ್) ರದ್ದುಪಡಿಸಬೇಕು ಎಂದು ಆಗ್ರಹಿಸಿ ರೈಲ್ವೆ ನೌಕರರು ನಗರದಲ್ಲಿ ನಡೆಸುತ್ತಿರುವ ಪ್ರತಿಭಟನೆ ಬುಧವಾರವೂ ಮುಂದುವರಿಯಿತು.

ನೈಋತ್ಯ ರೈಲ್ವೆ ಮಜ್ದೂರ್ ಯೂನಿಯನ್ ನೇತೃತ್ವದಲ್ಲಿ ನಗರದ ರೈಲ್ವೆ ವಿಭಾಗೀಯ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

2004ರಲ್ಲಿ ಹಳೆಯ ಪಿಂಚಣಿ ಪದ್ಧತಿಯನ್ನು ರದ್ದುಗೊಳಿಸಿ ಹೊಸ ಪಿಂಚಣಿ ಜಾರಿಗೊಳಿಸಲಾಗಿದೆ. ಇದರಲ್ಲಿ ಪ್ರತಿ ತಿಂಗಳು ದೇಣಿಗೆ ನೀಡಿ ನಿವೃತ್ತಿಯ ಸಮಯದಲ್ಲಿ ಶೇ.60ರಷ್ಟನ್ನು ಹಿಂಪಡೆದು, ಉಳಿದ ಶೇ.40ಅನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿ, ಅದರಲ್ಲಿ ದೊರೆತ ಲಾಭದಿಂದ ಪಿಂಚಣಿ ಕೊಡಲಾಗುತ್ತಿದೆ. ಇದು ಮಾರುಕಟ್ಟೆ ಆಧಾರಿತವಾದ ಕಾರಣ ನಿಯಮಿತ ಪಿಂಚಣಿಯ ಖಾತ್ರಿ ಇದರಲ್ಲಿ ಇಲ್ಲ. ಹೀಗಾಗಿ ಇದು ನೌಕರರಿಗೆ ಹಿತವಾಗುತ್ತಿಲ್ಲ. ಬದಲಿಗೆ ಮಾರಕವಾಗಿದೆ ಎಂದು ಕಿಡಿಕಾರಿದರು.

ಹಳೇ ಪಿಂಚಣಿ ವ್ಯವಸ್ಥೆಯನ್ನು ಮರುಸ್ಥಾಪನೆ ಮಾಡಬೇಕು. ಆ ಮೂಲಕ ಸರ್ಕಾರಿ ನೌಕರರ ಹಿತ ಕಾಯಬೇಕು ಎಂದು ಆಗ್ರಹಿಸಿದರು. ಸಂಘಟನೆ ಮುಖಂಡರಾದ ಪಿ.ಶಿವಪ್ರಕಾಶ್, ಎಸ್.ಸೋಮಶೇಖರ್, ವಿ.ಅಶೋಕ್‌ಕುಮಾರ್, ಎಂ.ನಾಗೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net