

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ, ಕಾವೇರಿ ಕ್ರಿಯಾ ಸಮಿತಿಯಿಂದ ನಗರದಲ್ಲಿ ನಡೆಸುತ್ತಿರುವ ಪ್ರತಿಭಟನೆ 57ನೇ ದಿನಕ್ಕೆ ಕಾಲಿಟ್ಟಿದೆ.
ನಗರದ ದೊಡ್ಡ ಗಡಿಯಾರದ ಬಳಿ ಮಂಗಳವಾರ ಸಮಾವೇಶಗೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಮೆಲ್ಲಹಳ್ಳಿ ಮಹಾದೇವಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಸೂಕ್ತ ಮಳೆಯಾಗದೆ ಕಾವೇರಿ ಕೊಳ್ಳದ ಜಲಾಶಯಗಳು ಬರಿದಾಗುತ್ತಿವೆ. ಈಗಾಗಲೇ ಕೃಷಿಗೆ ನೀರಿಲ್ಲದೆ ಭತ್ತ ಬೆಳೆಯದ ಕಾರಣ ಅಕ್ಕಿಯ ಬೆಲೆ ಗಗನಕ್ಕೇರಿದೆ ಎಂದರು.
ಬೆಂಗಳೂರು-ಮೈಸೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವ ಶುರುವಾಗಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಕುಡಿಯುವ ನೀರಿಗೂ ತೊಂದರೆಯಾಗುತ್ತದೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಹಾಗೂ ಕಾವೇರಿ ನ್ಯಾಯ ಮಂಡಳಿ ಗಮನಕ್ಕೆ ತಂದು, ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಜಯಪ್ರಕಾಶ್, ಉಪಾಧ್ಯಕ್ಷ ಎಂ.ಜೆ.ಸುರೇಶ್‌ಗೌಡ, ರಾಜ್ಯ ರೈತ ಸಂಘದ ವರಕೋಡು ಕೃಷ್ಣೇಗೌಡ, ಸಿಂಧುವಳ್ಳಿ ಶಿವಕುಮಾರ್, ಗಾಣಿಗನಕೊಪ್ಪಲು ನಾಗರಾಜು, ಕರ್ನಾಟಕ ಸೇನಾಪಡೆಯ ತೇಜೇಶ್ ಲೋಕೇಶ್‌ಗೌಡ, ಹನುಮಂತಯ್ಯ, ಪ್ರಭಾಕರ್, ಕೃಷ್ಣಪ್ಪ, ರಾಜಕುಮಾರ್ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಎಸ್.ಬಾಲಕೃಷ್ಣ, ನೇಹಾ, ದೇವರಾಜ್, ವಿಷ್ಣು, ಆರ್.ಮಂಜುಳಾ, ಪುಷ್ಪಾವತಿ, ಎನ್.ಮಂಜುಳಾ ಇತರರು ಇದ್ದರು.