ಮುಂದುವರಿದ ಮುಸುಕುಧಾರಿಗಳ ಅಟ್ಟಹಾಸ, ಬಾಗಿಲು ಮುರಿದು ಚಾಕು ಇರಿದು ದರೋಡೆ....ಅಬ್ಬಬ್ಬಾ ಭಯಾನಕ !

DARODE JAINAPUR LEYOUT
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತೋಷ ಕನ್ನಾಳ ಅವರಿಂದ ಮಾಹಿತಿ ಪಡೆಯುತ್ತಿರುವ ಎಎಸ್‌ಪಿ ಶಂಕರ ಮಾರಿಹಾಳ ಹಾಗೂ ಸಿಬ್ಬಂದಿ.
Published on

ವಿಜಯಪುರ: ಹಾಡ-ಹಗಲೇ ಕಳ್ಳತನ, ಕುಟುಂಬಸ್ಥರ ಸಮ್ಮುಖದಲ್ಲಿಯೇ ಕಳ್ಳತನ, ಚಾಕು ಇರಿದು-ಬಾಗಿಲು ಮುರಿದು ಚಿನ್ನದೋಚುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇಡೀ ವಿಜಯಪುರ ಜಿಲ್ಲೆ ಭಯ-ಆತಂಕದಿಂದ ತತ್ತರಿಸಿದೆ.

ಕಳೆದೊಂದು ತಿಂಗಳಿನಿಂದ ಜಿಲ್ಲೆಯಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ನಗರ-ಪಟ್ಟಣ ಪ್ರದೇಶಗಳ ಹೊರವಲಯದ ಮನೆಗಳು, ತೋಟದ ವಸ್ತಿಗಳು, ಒಂಟಿ ಮನೆಗಳಲ್ಲಿ ಜೀವ ಭಯ ಸೃಷ್ಠಿಯಾಗಿದೆ. ಜೀವ ಕೈಯಲ್ಲಿ ಹಿಡಿದು ಜೀವಿಸುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಪೊಲೀಸರು ಕೆಲವರನ್ನು ಬಂಧಿಸಿದ್ದಾರಾದರೂ ಇದೀಗ ಮತ್ತೆ ಮುಸುಕುಧಾರಿಗಳು ಮನೆಗಳಿಗೆ ನುಗ್ಗುತ್ತಿರುವುದು ಸಾರ್ವಜನಿಕರ ನಿದ್ರೆ ಕೆಡಿಸಿದೆ.

ಚಾಕು ಇರಿದು ಕಳ್ಳತನ

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಜಮೀನು ಕಳೆದುಕೊಂಡ ಸಂತ್ರಸ್ತರಿಗಾಗಿ ವಿಜಯಪುರ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಂತೆ ನಿರ್ಮಿಸಿರುವ ಜೈನಾಪುರ ಲೇಔಟ್‌ನಲ್ಲಿ ಬುಧವಾರ ಮಧ್ಯರಾತ್ರಿ 1 ರ ಸುಮಾರಿಗೆ ಭಯಂಕರ ದರೋಡೆ ನಡೆದಿದೆ. ಮಾಸ್ಕ್ ಧರಿಸಿ, ಕೈಯಲ್ಲಿ ಚಾಕು ಮತ್ತಿತರ ಮಾರಕಾಸ್ತ್ರ ಹಿಡಿದು ಬಂದ ದುಷ್ಕರ್ಮಿಗಳು ಸಂತೋಷ ಕನ್ನಾಳ ಎಂಬುವರ ಮನೆಯ ಬಾಗಿಲು ಮುರಿದು ಒಳನುಗ್ಗಿದ್ದಲ್ಲದೇ ಸಂತೋಷ ಕನ್ನಾಳ ಹಾಗೂ ಭಾಗ್ಯಜ್ಯೋತಿ ಕನ್ನಾಳ ಎಂಬುವರಿಗೆ ಚಾಕುವಿನಿಂದ ಎದೆ ಹಾಗೂ ಬೆನ್ನಿಗೆ ಚುಚ್ಚಿದ್ದಾರೆ. ಅಲ್ಲದೇ ಸಂತೋಷ ಅವರನ್ನು ಮಹಡಿ ಮೇಲಿನಿಂದ ಎತ್ತಿ ಎಸೆದಿದ್ದಾರೆ. ಕೊರಳಲ್ಲಿನ ಚೈನ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಗಾಯಾಳು ಸಂತೋಷ ಕನ್ನಾಳ ಹಾಗೂ ಭಾಗ್ಯಜ್ಯೋತಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಭಯದಿಂದ ಹೊರಬಂದಿಲ್ಲ. ಎಎಸ್‌ಪಿ ಶಂಕರ ಮಾರಿಹಾಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರಲ್ಲದೇ ಆಸ್ಪತ್ರೆಯಲ್ಲಿರುವ ಗಾಯಾಳುಗಳಿಂದ ಮಾಹಿತಿ ಪಡೆದರು.

ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಸಿಸಿಟಿವಿಯಲ್ಲಿ ಕಳ್ಳರ ಚಲನವಲನಗಳು ಸೆರೆಯಾಗಿವೆ. ಐದಾರು ಜನ ಮಧ್ಯವಯಸ್ಕರು ಹಾಗೂ ತರುಣರುಳ್ಳ ಗುಂಪು ಕನ್ನಾಳ ಮನೆ ಕಡೆಗೆ ಬರುತ್ತಿದ್ದಂತೆ ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ಒಬ್ಬಾತ ಕಲ್ಲಿನಿಂದ ಅವುಗಳನ್ನು ಓಡಿಸುತ್ತಿದ್ದರೆ ಇನ್ನೊಬ್ಬಾತನ ಕೈಯಲ್ಲಿ ಹರಿತ ಆಯುಧ ಇರುವುದು ಗೋಚರಿಸುತ್ತದೆ. ಬಳಿಕ ಮನೆ ಮುಂದೆ ಸ್ವಲ್ಪ ಹೊತ್ತು ಅಡ್ಡಾಡಿದ್ದು, ನಂತರ ಗೇಟ್ ತೆರೆದು ಮನೆಗೆ ನುಗ್ಗುತ್ತಾರೆ.

ಈ ವೇಳೆಯೇ ಎಚ್ಚರವಾಗಿದ್ದಾಗಿ ತಿಳಿಸಿದ ಕುಟುಂಬಸ್ಥರು, ಕಿಟಕಿಯಲ್ಲಿ ಕಳ್ಳರನ್ನು ನೋಡಿದ್ದು ಏನುಮಾಡಬೇಕೆಂದು ಯೋಚಿಸುತ್ತಿರುವಾಗಲೇ ಬಾಗಿಲು ಒಡೆದು ಮನೆಗೆ ನುಗ್ಗಿ ಹಲ್ಲೆಗೈದರೆಂದು ತಿಳಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net