

ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ: ರಾಜ್ಯದಲ್ಲಿ ಬೆಸ್ಕಾಂಗೆ ಕಳೆದ ವರ್ಷ 9 ಸಾವಿರ ಮೆಗಾವ್ಯಾಟ್ ಇದ್ದ ಬೇಡಿಕೆ ಈ ಬಾರಿ ಮಳೆ ಕೊರತೆಯಿಂದಾಗಿ 16 ರಿಂದ 17 ಸಾವಿರ ಮೆಗಾವ್ಯಾಟ್‌ಗೆ ಏರಿಕೆಯಾಗಿದೆ. ಹೀಗಾಗಿ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂಬ ದುಸ್ಥಿತಿ ನಿರ್ಮಾಣವಾಗಿದೆ.
ನಾಡಿನಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಗಾಳಿ ಕೊರತೆಯೂ ಹೆಚ್ಚಾಗಿದೆ. ಹೀಗಾಗಿ ಪವನ ಮತ್ತು ಜಲ ವಿದ್ಯುಚ್ಛಕ್ತಿ ಉತ್ಪಾದನೆ ಕೂಡ ಎಂದಿಗಿಂತಲೂ ಶೇ.60ರಷ್ಟು ಕಡಿಮೆಯಾಗಿದೆ.
ರಾಯಚೂರು, ಬಳ್ಳಾರಿಯಲ್ಲೂ ಉತ್ಪಾದನೆ ಕುಂಠಿತ ಆಗಿದೆ. ಮತ್ತೊಂದೆಡೆ ಮಹಾರಾಷ್ಟ್ರದಿಂದ ಕಲ್ಲಿದ್ದಲು ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ. ಹೀಗಾಗಿ ಮಳೆ ಆಗದಿದ್ದರೆ, ಲೋಡ್ ಶೆಡ್ಡಿಂಗ್ ಪ್ರಕ್ರಿಯೆ ಮುಂದುವರಿಸುವುದು ಅನಿರ್ವಾಯವಾಗಲಿದೆ.
ಮಳೆ ಕೈಕೊಟ್ಟ ಕಾರಣ ಲಕ್ಷಾಂತರ ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಅನಿವಾರ್ಯವಾಗಿ ಪಂಪ್‌ಸೆಟ್‌ಗಳ ಮೊರೆ ಹೋಗಿರುವುದು ಕೂಡ ಬೇಡಿಕೆ ದುಪ್ಪಟ್ಟಾಗಲು ಕಾರಣ ಎಂಬ ಮಾಹಿತಿ ಇದೆ.
ವಿದ್ಯುತ್ ಪೂರೈಕೆಯೂ ನಿತ್ಯ ಶೇ.100ರಲ್ಲಿ ನಗರ ಪ್ರದೇಶಗಳಿಗೆ ಶೇ.30 ರಿಂದ 35ರಷ್ಟಾದರೆ, ಪಂಪ್‌ಸೆಟ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಅಗತ್ಯವಿರುವ ಕಾರಣ ಗ್ರಾಮೀಣ ಭಾಗಗಳಲ್ಲೇ ಶೇ.60ರಷ್ಟು ಖರ್ಚಾಗುತ್ತಿದೆ. ಹೀಗಾಗಿ ಪೂರೈಕೆ ಸಮಸ್ಯೆ ಜಟಿಲವಾಗಿ ಪರಿಣಮಿಸಿದೆ.
ಮೊದಲೆಲ್ಲಾ ನಿತ್ಯ 7 ಗಂಟೆ ಪೂರೈಸುತ್ತಿದ್ದ ವಿದ್ಯುತ್ ಅನ್ನು ಪ್ರಸಕ್ತ ಹಗಲಿನಲ್ಲಿ ಎರಡೂವರೆ, ರಾತ್ರಿ 2 ಗಂಟೆ ನೀಡುತ್ತಿದ್ದು, 3 ಗಂಟೆ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ. ಗುಣಮಟ್ಟದ ವಿದ್ಯುತ್ ಪೂರೈಸದ ಕಾರಣ ಬೆಳೆಗಳು ಒಣಗುತ್ತಿವೆ ಎಂದು ರಾಜ್ಯದ ಹಲವೆಡೆ ಬೆಸ್ಕಾಂ ಕಚೇರಿಗಳ ಮುಂಭಾಗ ರೈತರು, ರೈತಸಂಘದ ಪದಾಧಿಕಾರಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ವಿದ್ಯುತ್ ಸರಬರಾಜಿನಲ್ಲಿ ಮುಂದಾಗಬಹುದಾದ ದೊಡ್ಡ ಅನಾಹುತ ತಪ್ಪಿಸಲು ಕೇಂದ್ರ ಕಚೇರಿಯಿಂದಲೇ ಲೋಡ್ ಶೆಡ್ಡಿಂಗ್ ಸಮಯ ನಿಗದಿಯಾಗಲಿದೆ. ಎಲ್‌ಇಡಿ ಪರದೆಯ ಮೇಲೆ ರಾಜ್ಯದಲ್ಲಿ ನಿತ್ಯ ಉತ್ಪಾದಿಸುವ ಪ್ರಮಾಣ, ಎಷ್ಟು ಗಂಟೆ ವಿತರಿಸಬೇಕು ಎಂಬ ಮಾಹಿತಿಯನ್ನು ಸ್ವಯಂಚಾಲಿತ ಯಂತ್ರ ಸ್ಪಷ್ಟಪಡಿಸಲಿದ್ದು, ಅದನ್ನು ಆಧರಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಜಿಲ್ಲಾ ಕೇಂದ್ರದಲ್ಲಿ ಇದನ್ನು ನಿರ್ಧರಿಸುವುದಿಲ್ಲ ಎಂಬುದು ಬೆಸ್ಕಾಂ ಅಧಿಕಾರಿಯೊಬ್ಬರ ಸ್ಪಷ್ಟನೆ.
ನ್ಯೂಸ್ ಗ್ರಿಡ್ ವೈಫಲ್ಯಕ್ಕೂ ಕಾರಣವಾಗಲಿದೆ: ದೇಶದಲ್ಲಿ ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ (ಎನ್‌ಇಡಬ್ಲೂೃಎಸ್-ನ್ಯೂಸ್) ಹೆಸರಿನಲ್ಲಿ ಪವರ್ ಗ್ರಿಡ್‌ಗಳಿವೆ. ವೋಲ್ಟೇಜ್ ಮಟ್ಟ ಹೆಚ್ಚಾಗಿ ಜನರೇಷನ್ ಲೋಡ್ ಕಡಿಮೆಯಾದರೂ ಗ್ರಿಡ್ ವೈಫಲ್ಯವಾಗಲಿದೆ. ಸಿಸ್ಟಮ್ ಪ್ರೊಟೆಕ್ಷನ್ ಮೂಲಕವೇ ಪ್ರಕ್ರಿಯೆ ನಡೆಯುವ ಕಾರಣ ಮನಬಂದಂತೆ ಪೂರೈಸಲು ಸಾಧ್ಯವಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಈಚೆಗೆ ಉತ್ತರ ಭಾರತದಲ್ಲಿ ಪವರ್ ಗ್ರಿಡ್ ವೈಫಲ್ಯದಿಂದ 300ಕ್ಕೂ ಹೆಚ್ಚು ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರಿಗೆ ತುಂಬಾ ಅನಾನುಕೂಲವಾಗಿತ್ತು. ದಶಕಗಳ ಹಿಂದೆ ಮೂರು ಕಡೆ ಗ್ರಿಡ್ ವೈಫಲ್ಯ ಉಂಟಾಗಿ 14 ರಾಜ್ಯಗಳಲ್ಲಿ ಸಮಸ್ಯೆ ಉಂಟಾಗಿತ್ತು.
ಐದು ಗಂಟೆ ವಿದ್ಯುತ್ ಪೂರೈಸಬೇಕು: ಒಂದು ತಿಂಗಳಿನಿಂದ ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ. ವೋಲ್ಟೇಜ್ ಕಡಿಮೆಯಾದ ಪರಿಣಾಮ ಜಮೀನುಗಳಲ್ಲಿ ಪರಿವರ್ತಕಗಳು ಸುಟ್ಟು ಹೋಗುತ್ತಿವೆ. 5 ಗಂಟೆ ನೀಡಿದರೂ ಮೊದಲಿನಂತೆ ಪೂರೈಸಬೇಕು.-ಹಂಪಯ್ಯನಮಾಳಿಗೆ ಧನಂಜಯ, ತಾಲೂಕಾಧ್ಯಕ್ಷ, ರೈತಸಂಘ, ಚಿತ್ರದುರ್ಗ