

ಹುಬ್ಬಳ್ಳಿ: ಜನತಾ ಬಜಾರ್ ಮಾರುಕಟ್ಟೆ ಪ್ರದೇಶ ತೆರವು ಗುರುವಾರವೂ ಮುಂದುವರಿಯಿತು. ವ್ಯಾಪಾರಿಗಳು ಖಾಲಿ ಮಾಡಿಕೊಟ್ಟ ಅಂಗಡಿ, ಕಟ್ಟೆಗಳನ್ನು ಜೆಸಿಬಿ ಬಳಸಿ ನೆಲಸಮಗೊಳಿಸಲಾಗಿದೆ.
ತರಕಾರಿ, ಹೂವು-ಹಣ್ಣು, ಮೊಟ್ಟೆ, ಬಾಳೆ ಗಿಡ, ಪೂಜಾ ಸಾಮಗ್ರಿ, ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಹುತೇಕ ವ್ಯಾಪಾರಿಗಳು ಬುಧವಾರವೇ ಸಾಮಾನು-ಸರಂಜಾಮುಗಳನ್ನು ಬೇರೆಡೆ ಸಾಗಿಸಿ ಅಂಗಡಿ, ಕಟ್ಟೆಗಳನ್ನು ಖಾಲಿ ಮಾಡಿದ್ದರು. ಹೀಗೆ ಖಾಲಿ ಮಾಡಿದ ಕಟ್ಟಡಗಳನ್ನು ಬೆಳಗ್ಗೆ 5.30ರಿಂದ ಜೆಸಿಬಿ ಬಳಸಿ ಕೆಡವಲಾಯಿತು. ಕೆಲ ವ್ಯಾಪಾರಿಗಳು ಅಂಗಡಿಯ ಸಾಮಾನುಗಳನ್ನು ಗುರುವಾರ ಮಧ್ಯಾಹ್ನದವರೆಗೂ ಸಾಗಿಸುತ್ತಿದ್ದರು. ಸಂಜೆ ವೇಳೆಗೆ ಜಿ ಪ್ಲಸ್ 1 ಮಾದರಿಯ ಸಂಕೀರ್ಣ ಹೊರತುಪಡಿಸಿ ಜನತಾ ಬಜಾರ್ ಮಾರುಕಟ್ಟೆ ಪ್ರದೇಶ ಗ್ರೌಂಡ್ ಜಿರೋ (ನೆಲಸಮ) ಮಾಡಲಾಗಿತ್ತು.
ಜಿ ಪ್ಲಸ್ 1 ಮಾದರಿಯ ಕಟ್ಟಡದಲ್ಲಿ ಕಿರಾಣಿ ಸಾಮಾನು, ಸ್ಟೇಷನರಿ ಸೇರಿ 29 ಮಳಿಗೆಗಳಿವೆ. ಇವರಲ್ಲಿ ನೆಲ ಮಹಡಿ ಅಂಗಡಿಕಾರರಿಗೆ ಹೊಸೂರಿನಲ್ಲಿ ಹಾಗೂ ಮೊದಲ ಮಹಡಿ ಅಂಗಡಿಕಾರರಿಗೆ ಜನತಾ ಬಜಾರ್ ಮಾರುಕಟ್ಟೆಯಲ್ಲಿನ ಜಿ ಪ್ಲಸ್ 2 ಮಾದರಿ ಕಟ್ಟಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಕೆಲವರು ಸ್ಥಳಾಂತರಗೊಂಡಿದ್ದು, ಇನ್ನುಳಿದವರು ಸ್ಥಳಾಂತರಗೊಳ್ಳಲು 2 ದಿನಗಳ ಕಾಲಾವಕಾಶ ಕೋರಿದ್ದಾರೆ. ಜಿ ಪ್ಲಸ್ 1 ಮಾದರಿ ಕಟ್ಟಡವನ್ನು ಶನಿವಾರ ಅಥವಾ ಭಾನುವಾರ ನೆಲಸಮಗೊಳಿಸಲಾಗುವುದು ಎಂದು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ತಿಳಿಸಿದ್ದಾರೆ.
ಹೊಸೂರಿನಲ್ಲಿ 51 ಮಳಿಗೆಗಳನ್ನು ನಿರ್ವಿುಸಲಾಗಿದೆ. ತಮಗೆ ಹಂಚಿಕೆಯಾದ ಮಳಿಗೆಗಳಿಗೆ ಒಬ್ಬೊಬ್ಬರಾಗಿಯೇ ಸ್ಥಳಾಂತರಗೊಳ್ಳುತ್ತಿದ್ದಾರೆ. ಪೂಜೆ ಮಾಡಿ ಹೊಸ ಮಳಿಗೆಗೆ ಪ್ರವೇಶ ಮಾಡಿದರು. ನಂತರ ಸಾಮಾನುಗಳನ್ನು ತಂದು ಜೋಡಿಸಿಟ್ಟುಕೊಂಡರು.
ಇನ್ನೊಂದೆಡೆ ಜನತಾ ಬಜಾರ್ನ ತರಕಾರಿ, ಹೂವು ಹಣ್ಣು ಮಾರಾಟಗಾರರು, ಬೀದಿ ಬದಿ ವ್ಯಾಪಾರಿಗಳು ಗೋಕುಲ ರಸ್ತೆ ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕದ ಸ್ಥಳಕ್ಕೆ ಸ್ಥಳಾಂತರಗೊಳ್ಳಲಿಲ್ಲ. ಇಲ್ಲಿ ವ್ಯಾಪಾರಿಗಳು ಕುಳಿತುಕೊಳ್ಳುವಂತೆ ಸ್ಥಳ ಗುರುತು ಹಾಕುವ ಮಾರ್ಕಿಂಗ್ ಕೆಲಸವನ್ನು ಗುರುವಾರ ನಡೆಸಲಾಗಿದೆ. ಶೆಡ್ನಲ್ಲಿ 20 ಜನ ವ್ಯಾಪಾರಿಗಳು ಕುಳಿತುಕೊಳ್ಳಲು ತಲಾ 6 ಅಡಿ ಪ್ಲಸ್ 6 ಅಡಿ ಜಾಗವನ್ನು ಗುರುತಿಸಲಾಗಿದೆ. ಉಳಿದ ವ್ಯಾಪಾರಿಗಳಿಗೆ ಪೇವರ್ಸ್ ಮೇಲೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಒಟ್ಟು 177 ಬೀದಿ ಬದಿ ವ್ಯಾಪಾರಿಗಳಿಗೆ ಇಲ್ಲಿ ಸ್ಥಳಾವಕಾಶ ಕಲ್ಪಿಸುವುದು ಕಷ್ಟಕರವಾಗಿದೆ. ಶುಕ್ರವಾರವೂ ತರಕಾರಿ ಮಾರುಕಟ್ಟೆ ನೆಲೆಗೊಳ್ಳುವ ನಿರೀಕ್ಷೆ ಇಲ್ಲ.
ಸ್ಮಾರ್ಟ್ಸಿಟಿ ಯೋಜನೆಯ 18.35 ಕೋಟಿ ರೂ. ವೆಚ್ಚದಲ್ಲಿ ಜನತಾ ಬಜಾರ್ ಮಾರುಕಟ್ಟೆಯಲ್ಲಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ವಣವಾಗಲಿದೆ. 18 ತಿಂಗಳ ಅವಧಿಯಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಹೇಳಿದೆ. ಮೇ. ಎಸ್ಕೆಎಸ್ ಕಾರ್ಕಳ ಇನ್ಪ್ರಾ ಪ್ರಾಜೆಕ್ಟ್ಸ್ ಪ್ರೖೆವೇಟ್ ಲಿಮಿಟೆಡ್ ಗುತ್ತಿಗೆ ಪಡೆದಿದೆ.
ಗೋಕುಲ ರಸ್ತೆ ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕ ಇನ್ನೂ ಸಂಪೂರ್ಣ ವ್ಯವಸ್ಥೆ ಆಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪ್ರವೇಶದಲ್ಲಿ ಫುಟಪಾತ್ ಕುಸಿದು ಅಪಾಯಕಾರಿ ಸ್ಥಿತಿ ಇದೆ. ಎಲ್ಲ ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಜಾಗದ ಕೊರತೆ ಇದೆ. ವ್ಯಾಪಾರಿಗಳು ಕುಳಿತುಕೊಳ್ಳಲು ಮಾರ್ಕಿಂಗ್ ಮಾಡಿದ್ದು ಸರಿಯಾಗಿಲ್ಲ | ಪ್ರೇಮನಾಥ ಚಿಕ್ಕತುಂಬಳ, ಜನತಾ ಬಜಾರ್ ಚಿಕ್ಕ ವರ್ತಕರ ಸಂಘದ ಗೌರವಾಧ್ಯಕ್ಷ