

ಬಾಳೆಹೊನ್ನೂರು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರ ಮುಂದುವರಿದಿದೆ.
ಧಾರಾಕಾರ ಮಳೆಯಿಂದ ಭದ್ರಾನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹ ಸೃಷ್ಟಿಸುವ ಆತಂಕ ತಂದಿದೆ. ಮಳೆಯೊಂದಿಗೆ ಗಾಳಿಯೂ ಹೆಚ್ಚಾಗಿದ್ದು, ಥಂಡಿಯ ವಾತಾವರಣ ಹೆಚ್ಚಾಗಿದೆ. ಗಾಳಿ ಹೆಚ್ಚಾಗಿರುವುದರಿಂದ ತೋಟಗಳ ಕಾರ್ಮಿಕರಿಗೆ ರಜೆ ಘೋಷಣೆ ಮಾಡಲಾಗಿದೆ. ನಿರಂತರ ಮಳೆಯಿಂದ ಅಡಕೆ, ಕಾಫಿ ತೋಟಗಳಿಗೆ ರಾಸಾಯನಿಕ ಗೊಬ್ಬರ ಹಾಕುವುದು, ಬೋರ್ಡೋ ದ್ರಾವಣ ಸಿಂಪಡಣೆ ಸ್ಥಗಿತಗೊಂಡಿದೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಮಳೆ ಹೆಚ್ಚಾದ ಪರಿಣಾಮ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಇಳಿಕೆಯಾಗಿದೆ. ಜನರ ಓಡಾಟ ವಿರಳವಾಗಿದೆ.