‘ವಿಜಯವಾಣಿ’ ಯೋಗ ಸಾರಥ್ಯಕ್ಕೆ ನಿರಂತರ ಸಹಕಾರ

gls 25-1 yoga
ಗೊಳಸಂಗಿ ಗ್ರಾಮದಲ್ಲಿ ‘ವಿಜಯವಾಣಿ’ ದಿನಪತ್ರಿಕೆ, ಶ್ರೀ ರಾ.ಅ. ದಳವಾಯಿ ಪ್ರೌಢಶಾಲೆ ಸಹಯೋಗದಲ್ಲಿ ಬುಧವಾರ ನಡೆದ ಯೋಗ ಶಿಬಿರದ ಸಮಾರೋಪ ಸಮಾರಂಭದ ಕುರಿತು ಶಿಕ್ಷಣ ಸಂಸ್ಥೆ ಅಧ್ಯಕ್ಷ ಶೇಖರ ದಳವಾಯಿ ಮಾತನಾಡಿದರು. ವೇ. ಹುಚ್ಚಯ್ಯಸ್ವಾಮಿ ದೇವಾಂಗಮಠ, ಗ್ರಾಪಂ ಅಧ್ಯಕ್ಷ ರಾವುತ ಸೀಮಿಕೇರಿ, ಪತ್ರಕರ್ತ ಡಿ.ಬಿ. ಕುಪ್ಪಸ್ತ ಮತ್ತಿತರಿದ್ದರು.
Published on

ಗೊಳಸಂಗಿ: ಸುದ್ದಿ ಪ್ರಸಾರದ ಜತೆಗೆ ಯೋಗ ಶಿಬಿರ ಆಯೋಜಿಸಿ ಸಾಮಾಜಿಕ ಕಳಕಳಿ ಮೆರೆಯುತ್ತಿರುವ ‘ವಿಜಯವಾಣಿ’ ದಿನಪತ್ರಿಕೆ ಗೊಳಸಂಗಿ ಗ್ರಾಮದಲ್ಲಿ ಇನ್ನು ಮುಂದೆ ವಹಿಸುವ ಯೋಗ ಸಾರಥ್ಯಕ್ಕೆ ಪ್ರತಿವರ್ಷವೂ ಸಹಕಾರ ನೀಡುವುದಾಗಿ ಎಸ್‌ಆರ್‌ಎಡಿ ಪ್ರೌಢಶಾಲೆ ಅಧ್ಯಕ್ಷ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ ದಳವಾಯಿ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ದಿನಪತ್ರಿಕೆ, ಸ್ಥಳೀಯ ಶ್ರೀ ರಾಮಸ್ವಾಮಿ ಅಪ್ಪಣ್ಣಪ್ಪ ದಳವಾಯಿ ಪ್ರೌಢಶಾಲೆ ಸಹಯೋಗದಲ್ಲಿ ಜೂ.21 ರಿಂದ ನಡೆದು ಬಂದ ಯೋಗ ಶಿಬಿರ ಸಮಾರೋಪ ಸಮಾರಂಭದಲ್ಲಿ ಬುಧವಾರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಿಜಯವಾಣಿ’ ದಿನಪತ್ರಿಕೆ ಮುಂದಿನ ವರ್ಷದಿಂದ ಆಯೋಜಿಸುವ ಯೋಗ ಶಿಬಿರಕ್ಕೆ ತಮ್ಮ ಶಿಕ್ಷಣ ಸಂಸ್ಥೆ ವತಿಯಿಂದ ಕರಪತ್ರ, ಆಮಂತ್ರಣ ಮುದ್ರಣದಿಂದ ಹಿಡಿದು ಶಿಬಿರಾರ್ಥಿಗಳಿಗೆ ಬೇಕಾಗುವ ಮ್ಯಾಟ್, ಯೋಗ ಶಿಕ್ಷಕರ ವ್ಯವಸ್ಥೆ, ವೇದಿಕೆ, ಧ್ವನಿವರ್ಧಕ, ಲಘುಪಾನೀಯ, ಲಘು ಉಪಾಹಾರ ಸೇರಿ ಎಲ್ಲ ಬಗೆಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪತ್ರಕರ್ತ ಡಿ.ಬಿ. ಕುಪ್ಪಸ್ತ ಮಾತನಾಡಿ, ಗೊಳಸಂಗಿ ಭಾಗದಲ್ಲಿ 7 ವರ್ಷಗಳಿಂದ ನಮ್ಮ ‘ವಿಜಯವಾಣಿ’ ದಿನಪತ್ರಿಕೆ ಸಾರಥ್ಯದಲ್ಲಿ ಯೋಗ ಶಿಬಿರ ಆಯೋಜನೆ ಹಿಂದೆ ಗ್ರಾಮಸ್ಥರ ಸಹಕಾರ ಅವರ್ಣನೀಯ ಎಂದರು. ಯೋಗ ಶಿಕ್ಷಕ ದಯಾಸಾಗರ ಆರಾಧ್ಯೆ ಮಾತನಾಡಿದರು.

ಶಿಬಿರಾರ್ಥಿಗಳ ಪರ ಬಿ.ಎಸ್. ಮೇಟಿ, ಎಸ್.ಟಿ. ಗುಡ್ಡದ, ಅಮರೇಶಗೌಡ ಪಾಟೀಲ, ದೇವೇಂದ್ರ ಬಳಮಕರ ಮಾತನಾಡಿ, ಯೋಗ ಶಿಬಿರದಲ್ಲಿ ಪಾಲ್ಗೊಂಡ ನಮಗೆ ಮೊಣಕಾಲು ನೋವು, ಜಠರ ಬಾಧೆ ನಿಯಂತ್ರಣಕ್ಕೆ ಬಂದಿದೆ. ವಿಜಯವಾಣಿ ಪ್ರತಿವರ್ಷವೂ ಯೋಗ ಶಿಬಿರ ಆಯೋಜಿಸಬೇಕು ಎಂದರು.

ವೇ. ಹುಚ್ಚಯ್ಯಸ್ವಾಮಿ ದೇವಾಂಗಮಠ ಸಾನ್ನಿಧ್ಯ ವಹಿಸಿದ್ದರು.

ಗ್ರಾಪಂ ಅಧ್ಯಕ್ಷ ರಾವುತ ಸೀಮಿಕೇರಿ, ಅಂತಾರಾಷ್ಟ್ರೀಯ ಯೋಗ ಪಟು ಶ್ರೀರಕ್ಷಾ ಉಪಾಧ್ಯೆ ಇದ್ದರು.

ಮಲ್ಲಿಕಾರ್ಜುನ ಕುಪ್ಪಸ್ತ ಪ್ರಾರ್ಥಿಸಿದರು. ಶಿಕ್ಷಕ ಜಗದೀಶ ಹಟ್ಟಿ ಸ್ವಾಗತಿಸಿದರು. ವಿ.ಎಂ. ದಳವಾಯಿ, ಸಂಗಮೇಶ ಗುಳೇದಗುಡ್ಡ ನಿರೂಪಿಸಿದರು. ಶಿವು ಚವ್ಹಾಣ ವಂದಿಸಿದರು.

ನಂತರ ಶಿಬಿರಾರ್ಥಿಗಳಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net