

ಬಂಟ್ವಾಳ: ಜಿಲ್ಲಾಧಿಕಾರಿಯವರ ಮೌಖಿಕ ಆದೇಶದ ಮೇರೆಗೆ ಸ್ಥಗಿತಗೊಂಡಿದ್ದ ಅಮೃತ ನಿರ್ಮಲ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ಪುರಸಭೆಯ ಪಿಂಕ್ ಶೌಚಗೃಹದ ಕಟ್ಟಡ ಕಾಮಗಾರಿ ಮುಂದುವರಿಸಲು ಪುರಸಭೆಯ ಕೌನ್ಸಿಲ್ ಸೋಮವಾರ ಹಸಿರು ನಿಶಾನೆ ತೋರಿದೆ.
ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಜೆಂಡಾ ಮೇಲಿನ ವಿಚಾರದಲ್ಲಿ ಪಿಂಕ್ ಶೌಚಗೃಹ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವುದು ಚರ್ಚೆಗೆ ಬಂತು. ಶೌಚಗೃಹ ಸೂಕ್ತ ಸ್ಥಳದಲ್ಲಿಲ್ಲ ಎಂಬ ಕಾರಣಕ್ಕೆ ಸಾರ್ವಜನಿಕರ ಲಿಖಿತ ಆಕ್ಷೇಪ ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿತ್ತು. ಅಂತೆಯೇ ಬಂಟ್ವಾಳ ಮಿನಿ ವಿಧಾನಸೌಧಕ್ಕೆ ಜಿಲ್ಲಾಧಿಕಾರಿ ಭೇಟಿ ಸಂದರ್ಭ ಅವರು ಸ್ಥಳ ಪರಿಶೀಲಿಸಿ ಕೆಲಸ ನಿಲ್ಲಿಸುವಂತೆ ಮೌಖಿಕ ಆದೇಶ ನೀಡಿದ್ದರು ಎಂದು ಅಧ್ಯಕ್ಷ ಮಹಮ್ಮದ್ ಶರೀಫ್ ಸಭೆಯ ಗಮನಕ್ಕೆ ತಂದರು.
ಟಾಯ್ಲೆಟ್ ನಿರ್ಮಾಣವಾಗುತ್ತಿರುವ ಜಾಗದಲ್ಲಿ ಹಿಂದೆ ಸಾರ್ವಜನಿಕ ರಂಗಮಂದಿರ ಇತ್ತು. ಎರಡು ವರ್ಷಗಳ ಹಿಂದೆಯೇ ಅದನ್ನು ತೆರವು ಮಾಡಲಾಗಿದೆ. ಅಲ್ಲಿ ಮತ್ತೆ ರಂಗಮಂದಿರವನ್ನೇ ನಿರ್ಮಿಸಬೇಕು ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಪುರಸಭೆಯ ಜಾಗದಲ್ಲೇ ಕನ್ನಡ ಭವನ ನಿರ್ಮಾಣಗೊಂಡಿದ್ದು ಅಲ್ಲೂ ರಂಗಮಂದಿರ ಇದೆ. ರಂಗಮಂದಿರ ಬೇಕು ಎನ್ನುವವರಿಗೆ ಅದನ್ನು ಬಳಸಿಕೊಳ್ಳಬಹುದಲ್ಲವೇ ಎಂದು ಗೋವಿಂದ ಪ್ರಭು ಪ್ರತಿಕ್ರಿಯಿಸಿದರು. ಈಗ ಮಿನಿ ವಿಧಾನಸೌಧದ ಗೇಟ್ ಬಳಿ ಶೌಚಗೃಹ ನಿರ್ಮಾಣಕ್ಕೆ ಆಕ್ಷೇಪ ಎತ್ತುವವರು ಈ ಹಿಂದೆ ತಾಲೂಕು ಕಚೇರಿಯ ಪ್ರವೇಶ ಗೇಟ್ ಬಳಿಯಲ್ಲೇ ಸುಲಭ ಶೌಚಗೃಹ ಇದ್ದಾಗ ಏಕೆ ಆಕ್ಷೇಪಿಸಿರಲಿಲ್ಲ ಎಂದು ಪ್ರಶ್ನಿಸಿದರು. ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಣಯ ಕೈಗೊಂಡು ಪುರಸಭೆಯ ಜಾಗದಲ್ಲೇ ಪಿಂಕ್ ಟಾಯ್ಲೆಟ್ ನಿರ್ಮಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ರಾಮಕೃಷ್ಣ ಆಳ್ವ ತಿಳಿಸಿದರು. ಕೌನ್ಸಿಲ್ ಸಭೆಯ ತೀರ್ಮಾನದಂತೆ ನಿರ್ಮಾಣಗೊಳ್ಳುತ್ತಿರುವ ಪಿಂಕ್ ಟಾಯ್ಲೆಟ್ ಕೆಲಸ ನಿಲ್ಲಿಸಲು ಜಿಲ್ಲಾಧಿಕಾರಿ ಆದೇಶ ಮಾಡುವುದಾದರೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಬೆಲೆ ಇಲ್ಲವೇ ಎಂದು ವಾಸು ಪೂಜಾರಿ ಪ್ರಶ್ನಿಸಿದರು. ಮಿನಿ ವಿಧಾನಸೌಧದ ಒಳಗೆ ಶೌಚಗೃಹ ಇದ್ದು ಹೊರಭಾಗದಲ್ಲಿ ಮತ್ತೊಂದು ಶೌಚಗೃಹ ಬೇಕಾ ಎಂದು ಮೊನಿಶ್ ಅಲಿ ಪ್ರತಿಕ್ರಿಯಿಸಿದರು.
ಮಕ್ಕಳಿಗೆ ಹಾಲುಣಿಸುವ ಕೇಂದ್ರವೂ ಹೌದು:
ಪಿಂಕ್ ಟಾಯ್ಲೆಟ್ ಕೇವಲ ಶೌಚಗೃಹವಾಗಿರದೆ ಮಕ್ಕಳಿಗೆ ಹಾಲುಣಿಸುವ ಕೇಂದ್ರವೂ ಆಗಿದ್ದು ಸುಸಜ್ಜಿತ ವ್ಯವಸ್ಥೆ ಒಳಗೊಂಡಿರುತ್ತದೆ. ಮಿನಿ ವಿಧಾನಸೌಧದ ಒಳಗಿರುವ ಶೌಚಗೃಹಕ್ಕೆ ಬೀಗ ಹಾಕಿರುತ್ತದೆ. ಆದ್ದರಿಂದ ಮಹಿಳೆಯರ ಉಪಯೋಗಕ್ಕಾಗಿ ಪಿಂಕ್ ಟಾಯ್ಲೆಟ್ ನಿರ್ಮಿಸಲಾಗುತ್ತಿದೆ ಎಂದು ಮನವರಿಕೆ ಮಾಡಿದ ಬಳಿಕ ಕೌನ್ಸಿಲ್ ಸಭೆ, ಸ್ಥಗಿತಗೊಂಡಿರುವ ಪಿಂಕ್ ಟಾಯ್ಲೆಟ್ ಕಾಮಗಾರಿ ಮುಂದುವರಿಸುವಂತೆ ಇಂಜಿನಿಯರ್‌ಗೆ ಸೂಚನೆ ನೀಡಿತು.