

ಮೂಡಿಗೆರೆ: ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದ ತರಬೇತಿ ಪಡೆದ ಬಳಿಕ ಅದನ್ನು ಮೊಟಕುಗೊಳಿಸದೆ ಮುಂದುವರಿಸಿದಲ್ಲಿ ಮುಂದಿನ ಜೀವನಕ್ಕೆ ದಾರಿ ದೀಪವಾಗಲಿದೆ ಹಾಗೂ ತರಬೇತಿ ನೀಡಿದ ಸಂಸ್ಥೆಗೂ ಗೌರವ ಸಂದಾಯವಾಗಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಿ.ಶಿವಾನಂದ ಹೇಳಿದರು.
ಪಟ್ಟಣದ ಛತ್ರ ಮೈದಾನ ಸಮುದಾಯ ಭವನದಲ್ಲಿ ಕಳೆದ 3 ತಿಂಗಳಿನಿಂದ ಮಹಿಳೆಯರಿಗಾಗಿ ನಡೆದ ಹೊಲಿಗೆ ತರಬೇತಿ ಕಾರ್ಯಗಾರದ ಸಮಾರೋಪ ಕಾರ್ಯಕ್ರಮದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಜೀವನದ ಅನುಕೂಲಕ್ಕಾಗಿ ಪ್ರತಿಯೊಬ್ಬರೂ ವೃತ್ತಿಯನ್ನು ಹುಡುಕುತ್ತಾ ಸಾಗುವುದು ಕಂಡು ಬರುತ್ತದೆ. ಸ್ವಯಂ ವೃತ್ತಿ ಮೂಲಕ ಸಮಾಜ ಸೇವೆಯನ್ನು ಕೂಡ ಮಾಡಬಹುದು. ಅಲ್ಲದೆ ಜೀವನಕ್ಕಾಗಿ ದುಡಿಮೆ ಮಾಡಬಹುದು ಅಂತಹ ಉದ್ದೇಶದಿಂದ ಮಹಿಳೆಯರು ತಮ್ಮ ಮನೆಯಲ್ಲಿ ಹೊಲಿಗೆ ವೃತ್ತಿ ನಡೆಸಿಕೊಂಡು ವೃತ್ತಿ ಮಾರ್ಗ ಕಂಡುಕೊಳ್ಳಲು ಸುಲಭ ವಿಧಾನ ಮಾಡಿಕೊಡಲಾಗಿದೆ. ಹೊಲಿಗೆ ತರಬೇತಿ ಪಡೆದವರು ತಮ್ಮ ಕಲಿಕೆಯನ್ನು ಅರ್ಧಕ್ಕೆ ಬಿಡದೆ ಮುಂದುವರಿಸಿದಲ್ಲಿ ಜೀವನ ಸುಗಮವಾಗುತ್ತದೆ ಎಂದು ತಿಳಿಸಿದರು.
ಪತ್ರಕರ್ತರಾದ ಕಿರುಗುಂದ ಅಬ್ಬಾಸ್, ಪ್ರಕಾಶ್ ಬಕ್ಕಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಾಮೋದರ, ಸೇವಾಪ್ರತಿನಿಧಿ ಪಾರ್ವತಿ, ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಗೀತಾ, ಚೇತನಾ ಇತರರಿದ್ದರು.