

ಅಂಕೋಲಾ: ಕೃಷಿ ಕ್ಷೇತ್ರವನ್ನು ಉತ್ತೇಜಿಸುವಂತಹ ಉತ್ಸವಗಳು, ಕಾರ್ಯಕ್ರಮಗಳು ಎಲ್ಲೆಡೆ ನಿರಂತರವಾಗಿ ನಡೆಯುತ್ತಿವೆ.
ಜತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂಘ-ಸಂಸ್ಥೆಗಳು ಸಾಮೂಹಿಕವಾಗಿ ಕೃಷಿ ಜಾಗೃತಿಯಲ್ಲಿ ತೊಡಗಿಸಿಕೊಂಡರೆ ಕೃಷಿ ಕ್ಷೇತ್ರದಲ್ಲಿ ಜಾಗೃತಿ ಮೂಡಬಹುದು ಎಂದು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಹೇಳಿದರು.
ಅಂಕೋಲಾ ಬೆಳೆಗಾರರ ಸಮಿತಿಯವರು ವಂದಿಗೆ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ ಕೃಷಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಳೆಗಾರರ ಸಮಿತಿ ಅಧ್ಯಕ್ಷ ಮತ್ತು ವಕೀಲ ನಾಗರಾಜ ನಾಯಕ ಮಾತನಾಡಿ, ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡ, ಸೇತುವೆಗಳು ಅಲ್ಲ.
ಕೃಷಿ ಕ್ಷೇತ್ರ ವೃದ್ಧಿಯಾದರೆ ಮಾತ್ರ ನಿಜವಾದ ಅಭಿವೃದ್ಧಿ ಸಾಧಿಸಿದಂತೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರ ಇದನ್ನು ಮೊದಲು ಮನಗಾಣಬೇಕು. ಕಡತಗಳಲ್ಲಿ ಕೃಷಿ ಕಾರ್ಯ ಆಗುವುದಿಲ್ಲ ಜತೆಗೆ ಮಣ್ಣಿನ ಸಹವಾಸ ಮಾಡಿದಾಗ ಮಾತ್ರ ಕೃಷಿ ಮಾಡಲು ಸಾಧ್ಯ ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಧರ ನಾಯ್ಕ ಮಾತನಾಡಿ, ಕೃಷಿ ಚಟುವಟಿಕೆಗಳಲ್ಲಿ ಕೂಲಿಕಾರರ ಸಮಸ್ಯೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಯಾಂತ್ರಿಕ ಕೃಷಿಗೆ ಮೊರೆ ಹೋಗುವುದು ಅನಿವಾರ್ಯ ಎಂದರು.
ಕೃಷಿ ಕುರಿತು ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ನಾಗರಾಜ ನಾಯಕ ಮಾತನಾಡಿದರು.
ವೇದಿಕೆಯಲ್ಲಿ ಅತಿಥಿಗಳಿಗೆ ಸಂಘಟಕರು ಕಂಬಳಿ ನೀಡಿ ಸ್ವಾತಿಸಿದರು. ಬೆಳೆಗಾರ ಸಮಿತಿ ಗೌರವಾಧ್ಯಕ್ಷ ದೇವರಾಯ ನಾಯಕ, ಹನುಮಂತ ಗೌಡ, ಹೊನ್ನಪ್ಪ ನಾಯಕ ಇದ್ದರು.
ನಾಟಿ ಪ್ರಾತ್ಯಕ್ಷಿಕೆ: ವಂದಿಗೆಯ ವೆಂಕಟ್ರಮಣ ನಾಯಕ ಅವರ ಭತ್ತದ ಗದ್ದೆಯಲ್ಲಿ ಅನುಭವಿಕ ರೈತರಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮಟ್ಟಾ ನಂ. 2 ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಭತ್ತದ ಸಸಿಯನ್ನು ನಾಟಿ ಮಾಡುವ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು.
ಮಹಾಂತೇಶ ರೇವಡಿ, ರೇಖಾ ಗಾಂವಕರ, ಜಗದೀಶ ಜಿ.ನಾಯಕ ಹೊಸ್ಕೇರಿ, ಬಿಂದೇಶ ನಾಯಕ ಹಿಚ್ಕಡ, ಹೊನ್ನಪ್ಪ ನಾಯಕ, ನಾರಾಯಣ ನಾಯಕ ಸೂರ್ವೆ, ಶಂಕರ ಗೌಡ ಅಡ್ಲೂರು, ಸುರೇಶ ನಾಯಕ ಅಲಗೇರಿ, ನಿತ್ಯಾನಂದ ಗಾಂವಕರ ಉಪಸ್ಥಿತರಿದ್ದರು. ಬೆಳೆಗಾರರ ಸಮಿತಿ ಕಾರ್ಯದರ್ಶಿ ರಾಮಚಂದ್ರ ಹೆಗಡೆ ನಿರ್ವಹಿಸಿದರು.