

ಹುಣಸೂರು: ಕೃಷಿ ಪಂಪ್‌ಸೆಟ್‌ಗಳಿಗೆ ಹೊಸ ಸಂಪರ್ಕ ಪಡೆಯಲು ಹಾಗೂ ಅಕ್ರಮ ಸಂಪರ್ಕವನ್ನು ಸಕ್ರಮಗೊಳಿಸಲು ರೈತರೇ ಖರ್ಚು ಭರಿಸಬೇಕು ಎಂದು ರಾಜ್ಯ ಸರ್ಕಾರ ತೀರ್ಮಾನಿಸಿರುವುದನ್ನು ಮರು ಪರಿಶೀಲಿಸಿ ಮೊದಲಿದ್ದ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಆಗ್ರಹಿಸಿದ್ದಾರೆ.
ಎಚ್.ಡಿ.ಕೋಟೆಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದ ವೇಳೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು, ರಾಜ್ಯದ ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ಸುಮಾರು 1.85 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವರ್ಜೀನಿಯಾ ತಂಬಾಕು ಬೆಳೆಯಲಾಗುತ್ತಿದ್ದು, ಅದರಲ್ಲೂ ವಿಶೇಷವಾಗಿ ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ರೈತರು ತಂಬಾಕನ್ನು ಬೆಳೆಯುತ್ತಿದ್ದಾರೆ. ಇದು ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಒಟ್ಟು 56 ಸಾವಿರ ಕುಟುಂಬಗಳು ತಂಬಾಕು ಲೈಸೆನ್ಸ್ ಹೊಂದಿದ್ದು, ಲಕ್ಷಾಂತರ ಉದ್ಯೋಗ ಕೂಡ ಸೃಷ್ಟಿಯಾಗಿದೆ. ತಂಬಾಕು ಬೆಳೆಯಲು ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲಿದ್ದು, ಬೆಲೆ ಮಾತ್ರ ಬಹಳ ಕಡಿಮೆ ದೊರೆಯುತ್ತಿದೆ. ಕಡಿಮೆ ದರ ಮುಂದುವರಿದಲ್ಲಿ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಸಾಲಿನಲ್ಲಿ ಸರಾಸರಿ ಬೆಲೆ ಕೆ.ಜಿ. ಒಂದಕ್ಕೆ 300 ರೂ. ಗಳಿಗಿಂತ ಕಡಿಮೆಯಾಗದಂತೆ ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕೆಂದು ಒತ್ತಾಯಿಸಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರ ತರಲು ಹೊರಟಿರುವ ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಬಾರದು ಎಂದು ಆಗ್ರಹಿಸಲಾಗಿದೆ ಎಂದು ಅವರು ತಿಳಿಸಿದರು.