ಕೈ ಹಿಡಿಯಲಿದೆ ನಿರಂತರ ಓದು

mysore
Published on

ಮೈಸೂರು: ಕಸನು ಮತ್ತು ಗುರಿ ಮಾತ್ರ ಹೊಂದಿದ್ದರೆ ಸಾಲದು, ಅದನ್ನು ಖಚಿತವಾದ ಯೋಜನೆಯೊಂದಿಗೆ ಕಠಿಣ ಶ್ರಮವನ್ನು ಅನುಷ್ಠಾನಗೊಳಿಸುವುದು ಬಹಳ ಮುಖ್ಯ. ಆಗ ಯಶಸ್ಸು ಖಂಡಿತ ಸಾಧ್ಯವಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿವೃತ್ತ ಜಂಟಿ ನಿದೇರ್ಶಕ ಡಾ. ಕಾ. ರಾಮೇಶ್ವರಪ್ಪ ಹೇಳಿದರು.


ಮೈಸೂರಿನ ಜ್ಞಾನಬುತ್ತಿ ಸಂಸ್ಥೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ 65 ದಿನಗಳ ಪಿಡಿಒ, ಎಫ್‌ಡಿಎ, ವಿಎ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭ, ಮಾಜಿ ಶಾಸಕ ವಾಸು, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮು, ಸಾಹಿತಿ ಕವಿತಾ ಕೃಷ್ಣ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಶ್ರಮಕ್ಕೆ ಪರ್ಯಾಯ ಯಾವುದೂ ಇಲ್ಲ ಎಂಬುದನ್ನು ಅರಿತು ಪ್ರಾಮಾಣಿಕ ಶ್ರಮ ವಹಿಸಬೇಕು. ಗುರುವಿನ ಮಾರ್ಗದರ್ಶನ, ನಿರಂತರ ಓದು ನಿಮ್ಮನ್ನು ಕೈ ಹಿಡಿಯುತ್ತದೆ. ಯಾವುದೇ ಪೂರ್ವಗ್ರಹ ಅಳುಕು ಇಲ್ಲದೆ ಗುರಿಯತ್ತ ಮುನ್ನುಗ್ಗಬೇಕು. ಶಿಕ್ಷಣವಿಲ್ಲದವರ ಬಾಳು ಸಮಸ್ಯೆಯಿಂದ ಕೂಡಿರುತ್ತದೆ ಎಂದು ಹೇಳಿದರು.


ಶಿವರಾಮು ಅವರು ಯಾವುದೇ ಹಿನ್ನೆಲೆಯಿಲ್ಲದ ತುಳಿತಕ್ಕೊಳಗಾದ ವ್ಯಕ್ತಿ. ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಅವರು ಸ್ಫೂರ್ತಿ ಎಂದರು.


ಅಧ್ಯಯನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ, ಏಕಾಗ್ರತೆಯಿಂದ ಓದಿ ಮನನ ಮಾಡಿಕೊಳ್ಳುವುದರಿಂದ ವಿಷಯ ಅರ್ಥವಾಗಲಿದೆ. ಯಾವುದೇ ಪಠ್ಯಗಳನ್ನು ಧಕ್ಕಿಸಿಕೊಳ್ಳಬೇಕೆಂದರೆ ನಿರಂತರ ಅಧ್ಯಯನ ಅಗತ್ಯ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸು ಸಾಧಿಸಬೇಕು ಎಂದರು.


ಅಖಿಲ ಭಾರತ ವಯಸ್ಕರ ಶಿಕ್ಷಣ ಸಮಿತಿ ನಿರ್ದೇಶಕ ವೈ.ಎನ್.ಶಂಕರೇಗೌಡ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್.ಬಾಲಕೃಷ್ಣ, ಸಂಪನ್ಮೂಲ ವ್ಯಕ್ತಿ ಎಸ್.ಗಣೇಶ್, ಡಾ.ಈ ಶಿವಪ್ರಸಾದ್, ಡಾ. ಪಳನಿಸ್ವಾಮಿ ಮೂಡಗೂರು, ಪ್ರೊ.ವಿ.ಜಯಪ್ರಕಾಶ್, ಡಾ.ಸುದರ್ಶನ್, ಪ್ರೊ.ಸಿ.ಕೆ. ಕಿರಣ್ ಕೌಶಿಕ್, ಕೆ.ವೈ. ನಾಗೇಂದ್ರ, ಯು.ಎಂ.ಶರದ್ ರಾವ್ ಭಾಗವಹಿಸಿದ್ದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net