

ವಿಜಯಪುರ: ಇಲ್ಲಿನ ಜಲನಗರದ ಬುದ್ಧ ವಿಹಾರದಲ್ಲಿ ಆಷಾಢ ಹುಣ್ಣಿಮೆಯಿಂದ ಆರಂಭವಾಗಿರುವ ವರ್ಷಾವಾಸ ಧಮ್ಮ ಪ್ರವಚನವು ಅಶ್ವಿನಿ ಪೂರ್ಣಿಮೆ (ಅಕ್ಟೋಬರ್ 17) ವರೆಗೆ ನಡೆಯಲಿದೆ ಎಂದು ಬೌದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ತಿಳಿಸಿದರು.
ವರ್ಷಾವಾಸದ ಮೂರು ತಿಂಗಳಲ್ಲಿ ಬೌದ್ಧ ಭಿಕ್ಕುಗಳು ಬೌದ್ಧ ಧರ್ಮದ ಸೂಕ್ಷ್ಮತೆಗಳ ಅಧ್ಯಯನ ಮತ್ತು ಧ್ಯಾನ ಹಾಗೂ ಪ್ರತಿದಿನ ಪ್ರವಚನಗಳನ್ನು ನೀಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜು. 28ರಂದು ಭಗವಾನ್ ಬುದ್ಧರ ಕರ್ಮ ಸಿದ್ಧಾಂತ, ಆ.4ರಂದು ಬೌದ್ಧರ ಪವಿತ್ರ ಸ್ಥಳಗಳು, ಆ.15ರಂದು ದೇಶಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆ, ಸೆ.1ರಂದು ಬೌದ್ಧ ಧರ್ಮ ಮತ್ತು ವಿಜ್ಞಾನ, ಸೆ.8ರಂದು ಬೌದ್ಧರ ನೀತಿ ಸಂಹಿತೆ, ಸೆ.15ರಂದು ಬೌದ್ಧರ ವಿಶೇಷ ಲಕ್ಷಣಗಳು, ಸೆ.22ರಂದು ಸಮತಾ ಸೈನಿಕ ದಳದ ಐತಿಹಾಸ ಕಾರ್ಯಗಳು, ಸೆ.29ರಂದು ಸಾಮ್ರಾಟ ಅಶೋಕ ಮತ್ತು ಬೌದ್ಧ ರಾಜರು, ಸೆ.12 ಅಶೋಕ ವಿಜಯದಶಮಿ, ಸೆ.13ರಂದು ಬೌದ್ಧ ಧರ್ಮ ಮತ್ತು ಮಾನವೀಯತೆ, ಸೆ.17ರಂದು ಮಾನವ ವಿಮೋಚನೆಯ ಪ್ರಣಾಳಿಕೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಇರಲಿದೆ ಎಂದು ತಿಳಿಸಿದರು.
ಕಲಬುರಗಿಯ ಜೇತವನ ಬುದ್ಧವಿಹಾರದ ಭಿಕ್ಕುಣಿ ಸುಮನಾ, ಭಿಕ್ಕು ಬೋಧಕೀರ್ತಿ, ಭಿಕ್ಕುಣಿ ಧಮ್ಮಸಾರ, ಧಮ್ಮದಿನ ಹಾಗೂ ಬುದ್ಧ ವಿಹಾರ ನಿರ್ಮಾಣ ಸಮಿತಿ ಕಾರ್ಯದರ್ಶಿ ನಾಗರಾಜ ಲಂಬು, ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷ ಐ.ಬಸವರಾಜ ಚಲವಾದಿ, ಶಶಿಕಾಂತ ಹೊನವಾಡಕರ, ವೆಂಕಟೇಶ ವಗ್ಯಾನವರ, ಪ್ರಿಯಾಂಕಾ ವಗ್ಯಾನವರ, ಸಂತೋಷ ಶಹಾಪುರ, ಚಿದಾನಂದ ನಿಂಬಾಳಕರ, ಭಾರತಿ ಹೊಸಮನಿ ಮತ್ತಿತರರಿದ್ದರು.