

ಜಮಖಂಡಿ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ತಯಾರಿಗೆ ಮಕ್ಕಳು ಈಗಿಂದಲೇ ಮಾನಸಿಕವಾಗಿ ಸಿದ್ಧತೆಗೊಳ್ಳಬೇಕು. ಆ ದಿಸೆಯಲ್ಲಿ ಎಲ್ಲ ಎಸ್‌ಎಸ್‌ಎಲ್‌ಸಿ ಮಕ್ಕಳನ್ನು ಪರೀಕ್ಷಾ ಮುಖ್ಯವಾಹಿನಿಗೆ ತರಲು ಶಿಕ್ಷಕರು ಪ್ರಯತ್ನಿಸಬೇಕು. ಫಲಿತಾಂಶ ಸುಧಾರಣೆಗೆ ನಿರಂತರ ಶ್ರಮ ವಹಿಸಬೇಕು ಎಂದು ಬಾಗಲಕೋಟೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ವಿಜ್ಞಾನ ವಿಷಯ ಪರಿವೀಕ್ಷಕ ಎಂ.ಎಸ್.ನ್ಯಾಮಗೌಡ ಹೇಳಿದರು.
ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಮಕ್ಕಳ ಜೊತೆಗೆ ಪರೀಕ್ಷಾ ಪೂರ್ವ ತಯಾರಿ ಹಾಗೂ ಪಠ್ಯ ವಿಷಯ ಕುರಿತು ಸಂವಾದ ನಡೆಸಿದ ಅವರು, ಪರೀಕ್ಷೆಗೆ ಸಿದ್ಧರಾಗಲು ಈಗಿನಿಂದಲೇ ಸಕಲ ತಯಾರಿ ಮಾಡಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸನ್ನದ್ಧರಾಗಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಮಕ್ಕಳ ಕಲಿಕಾ ಹಾಗೂ ಲಿತಾಂಶ ಪ್ರಗತಿಗೆ ಶಿಕ್ಷಕರು ಒತ್ತು ನೀಡಬೇಕು. ಈ ಬಾರಿ ಗ್ರೇಡ್ ಅಂಕಗಳಿಲ್ಲ. ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗಳಾಗಿವೆ. ಕಟ್ಟುನಿಟ್ಟಾಗಿ ಪರೀಕ್ಷೆಗಳು ಜರುಗಲಿವೆ. ಇದನ್ನು ಮಕ್ಕಳು ಹಾಗೂ ಶಿಕ್ಷಕರು ಸೂಕ್ಷ್ಮತೆಯಿಂದ ಗಮನಿಸಿ ತಮ್ಮ ಜವಾಬ್ದಾರಿ ನಿಭಾಯಿಸಲು ಮುಂದಾಗಬೇಕು ಎಂದರು.
ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಪಾಸಾಗಬೇಕೆಂಬ ಇಚ್ಛಾಶಕ್ತಿ ಮಕ್ಕಳಲ್ಲಿ ಮೂಡಬೇಕು. ಲಿತಾಂಶ ವದ್ಧಿಗೆ ಮಕ್ಕಳ ಕಲಿಕಾಸಕ್ತಿ ಹಾಗೂ ಶಿಕ್ಷಕರು ಪಠಿಸುವ ಗುಣಮಟ್ಟದ ಪಾಠ, ಬೋಧನೆಯೇ ಕಾರಣ. ಪರೀಕ್ಷಾ ವಿಶೇಷ ಕಾಳಜಿಯ ಪರಿಕಲ್ಪನೆ ಗುರು-ಶಿಷ್ಯರಲ್ಲಿ ಮೂಡಿಬರಬೇಕು. ಮಕ್ಕಳು ತಮ್ಮ ಮುಂದಿನ ಶೈಕ್ಷಣಿಕ ಭವಿಷ್ಯಕ್ಕಾಗಿ ಅನುದಿನ, ಅನುಕ್ಷಣ ಓದು,ಬರಹದಲ್ಲಿ ತಲ್ಲೀನರಾಗಬೇಕು ಎಂದರು.
ಮಕ್ಕಳಿಗೆ ಹಿಂದಿನ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಶಿಕ್ಷಕರು ನೀಡಿ ಪರೀಕ್ಷೆ ದುಗುಡ ಹೋಗಲಾಡಿಸಲು ಪ್ರಯತ್ನಿಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ಕಡ್ಡಾಯವಾಗಿ ಯತ್ನಿಸಿ. ಪರೀಕ್ಷಾ ಲಿತಾಂಶವೇ ನಮಗೆಲ್ಲ ಮುಖ್ಯ ಮಾನದಂಡ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಜಾಲೋಜಿ, ಗುಲಾಬಚಂದ ಜಾಧವ, ಈರಪ್ಪ ದೇಸಾಯಿ, ಲೋಹಿತ ಮಿರ್ಜಿ, ಶ್ರೀಶೈಲ ಹುಣಶಿಕಟ್ಟಿ, ಸಹನಾ ಕಲ್ಯಾಣಿ (ಹತ್ತಳ್ಳಿ), ಪ್ರಮೀಳಾ ತೇಲಸಂಗ ಇತರರಿದ್ದರು.