

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಚುನಾವಣೆಯಲ್ಲಿ ಸೋಲಿಸಿದರು. ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೂ ಸರಿಯಾದ ವ್ಯವಸ್ಥೆ ಕಲ್ಪಿಸಲಿಲ್ಲ. ಹೀಗೆ ಕಾಂಗ್ರೆಸ್ ಸರ್ಕಾರದಿಂದ ನಿರಂತರ ಅವಮಾನವಾಗಿದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದರು.
ಯಶವಂತಪುರದ ಸಂವಿಧಾನ ವೃತ್ತದ ಬಳಿ ಭಾನುವಾರ ಆಯೋಜಿಸಿದ್ದ ಸಂವಿಧಾನ ದಿನದ ನಿಮಿತ್ತ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾಗಾಂಧಿ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ದೇಶದ ಜನತೆ ತಕ್ಕ ಪಾಠ ಕಲಿಸಿದ್ದಾರೆ. ತಾವು ವಿಧಾನಸಭೆ ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ಸದನದಲ್ಲಿ ಸಂವಿಧಾನದ ಕುರಿತು ವಿಶೇಷ ಚರ್ಚೆ ನಡೆಸಿದ್ದನ್ನು ಕಾಗೇರಿ ಮೆಲುಕು ಹಾಕಿದರು.
ಹೆಸರಾಂತ ವಕೀಲ ಹರೀಶ್ ಎನ್ ಹರೀಶ್ ಅವರು ‘ಸಂವಿಧಾನ ತಿಳಿಯಿರಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಹೆಸರಾಂತ ವಕೀಲ ಹರೀಶ್ ಎನ್ ಹರೀಶ್, ಪಕ್ಷದ ಮಲ್ಲೇಶ್ವರ ಮಂಡಲ ಅಧ್ಯಕ್ಷೆ ಕಾವೇರಿ ಕೇದಾರನಾಥ್, ಮುಖಂಡರು ಇದ್ದರು.