ಸಮಾಜದ ಏಳಿಗೆಗಾಗಿ ಮಠಗಳಿಂದ ನಿರಂತರ ಶ್ರಮ: ಸುತ್ತೂರು ಶ್ರೀ

sutturu sri
Published on

ಮೈಸೂರು: ಸಮಾಜದ ಏಳಿಗೆಗಾಗಿ ಮಠಗಳು ತ್ರಿವಿಧ ದಾಸೋಹದ ಮೂಲಕ ನಿರಂತರವಾಗಿ ಶ್ರಮಿಸುತ್ತಿವೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.


ಶ್ರೀ ನಾಗಭೂಷಣ ಸ್ವಾಮೀಜಿ ಅವರ ಪುಣ್ಯಾರಾಧನೆಯ ನಿಮಿತ್ತ ನಂಜನಗೂಡು ತಾಲೂಕಿನ ಸೂರಹಳ್ಳಿ ವಿರಕ್ತ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.


ಮಠಗಳು ಮತ್ತು ಸಮಾಜ ಒಂದಕ್ಕೊಂದು ಪೂರಕವಾದವು. ಯಾವುದೇ ಭೇದ-ಭಾವಗಳಿಲ್ಲದೆ ಎಲ್ಲರಿಗೂ ಮಠಗಳು ಸೇವೆಯನ್ನು ಸಲ್ಲಿಸುತ್ತಿವೆ. ನಾಗಭೂಷಣಸ್ವಾಮಿ ಪೂಜಾ ನಿಷ್ಠರಾಗಿದ್ದರು. ಆಧ್ಯಾತ್ಮಿಕ ಚಿಂತನೆಗಳಲ್ಲಿ ಅತೀವ ಒಲವುಳ್ಳವರಾಗಿದ್ದರು. ಅವರ ಉತ್ತರಾಧಿಕಾರಿಗಳಾಗಿರುವ ಶ್ರೀ ಕೆಂಡಗಣ್ಣಸ್ವಾಮಿ ಕ್ರಿಯಾಶೀಲರು. ಜೆಎಸ್‌ಎಸ್ ಗುರುಕುಲದಲ್ಲಿದ್ದುಕೊಂಡು ಅಧ್ಯಯನ ಮಾಡುತ್ತಿದ್ದಾರೆ. ಅವರ ಹಿರಿಯ ಶ್ರೀಗಳಂತೆ ಮಠದ ಎಲ್ಲ ಕಾರ್ಯಗಳನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲಿದ್ದಾರೆ ಎಂದು ತಿಳಿಸಿದರು.


ದೇವನೂರು ಶ್ರೀ ಮಹಾಂತ ಸ್ವಾಮೀಜಿ, ಸೂರಹಳ್ಳಿ ಶ್ರೀಗಳು ಸರಿಯಾದ ಮಾರ್ಗದಲ್ಲಿ ನಡೆದವರು. ಸಮಾಜದ ಬಗ್ಗೆ ಅತೀವವಾದ ನಿಷ್ಠೆಯನ್ನು ಹೊಂದಿದ್ದವರು. ದಾಸೋಹದಲ್ಲೇ ಭಗವಂತನನ್ನು ಕಂಡವರು ಎಂದರು.


ಹುಲ್ಲಹಳ್ಳಿ ವಿರಕ್ತಮಠದ ಶ್ರೀ ಇಮ್ಮಡಿ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಸೂರಹಳ್ಳಿ ಶ್ರೀಗಳು ಮೃದು ಸ್ವಭಾವದ ವ್ಯಕ್ತಿತ್ವವನ್ನು ಹೊಂದಿದ್ದವರು. ನಮ್ಮ ಹಿರಿಯ ಗುರುಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ತಿಳಿಸಿದರು.


ಕಿರಿಯ ಶ್ರೀಗಳಾದ ಶ್ರೀ ಕೆಂಡಗಣ್ಣ ಸ್ವಾಮೀಜಿ ಮಾತನಾಡಿ, ನಮ್ಮ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇನೆ. ಮಠದ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಲಹೆ ಮತ್ತು ಸಹಕಾರ ಅಗತ್ಯ ಎಂದರು.


ಕಸುವಿನಹಳ್ಳಿಯ ಶಿವಮೂರ್ತಿ, ರಾಂಪುರದ ಪಟೇಲ್ ಮಹದೇವಪ್ಪ, ಸೂರಹಳ್ಳಿ ಕೆಂಪರಾಜು, ಸೂರಹಳ್ಳಿ ವೀರಭದ್ರಸ್ವಾಮಿ, ರಮೇಶ್, ಚುಂಚನಹಳ್ಳಿ ಮಂಗಳ ಮಹದೇವಪ್ಪ, ಬೆಟ್ಟದಮಾದಹಳ್ಳಿ ಪ್ರಭುಸ್ವಾಮಿ, ಲಕ್ಷಣಾಪುರ ಚಿನ್ನಸ್ವಾಮಪ್ಪ, ಬಿಳುಗಲಿ ಗೀತಾ ಶಿವಪ್ಪದೇವರು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net