

ಗುಳೇದಗುಡ್ಡ: ತಾಲೂಕಿನ ಪರ್ವತಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆನಂದ ಲುಂಬಣ್ಣ ರಾಠೋಡ ಹಾಗೂ ಉಪಾಧ್ಯಕ್ಷರಾಗಿ ಗಾಯತ್ರಿ ಶಿವಪ್ಪ ಗೊರವರ ಅವಿರೋಧವಾಗಿ ಆಯ್ಕೆಯಾದರು.
16 ಸದಸ್ಯ ಬಲದ ಪರ್ವತಿ ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ ಆನಂದ ಗೌಡರ ತಿಳಿಸಿದರು. ಗ್ರಾಪಂ ಪಿಡಿಒ ಆರ್.ಎಸ್. ಮುದಗಲ್ಲ ಹಾಗೂ ಸಿಬ್ಬಂದಿ ಚುನಾವಣೆ ಪ್ರಕ್ರಿಯೆಗೆ ನೆರವಾದರು.
6 ಜನ ಸದಸ್ಯರು ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿ ಸಂತೋಷ ಕಲ್ಲಕುಟುಕರ, ಜ್ಯೋತಿ ದಾಸರ, ದ್ಯಾಮಣ್ಣ ಗಾಜಿ, ನಾಗಪ್ಪ ಗೌಡರ, ಪರಸಪ್ಪ ಕಡಿವಾಲರ, ಕವಿತಾ ಚವ್ಹಾಣ, ಸಂತೋಷ ರಾಠೋಡ, ಭೀಮವ್ವ ರಾಠೋಡ ಇದ್ದರು.