ಸಂಸದರ ಹೇಳಿಕೆಯಿಂದ ಬಿಜೆಪಿ ಕಾರ್ಯಕರ್ತರಿಗೆ ಬೇಸರ

mkg1b
Published on

ಹೊನ್ನಾಳಿ: ಮುಂದಿನ ಚುನಾವಣೆಯಲ್ಲಿ ಹೊನ್ನಾಳಿಯಿಂದ ಸ್ಪರ್ಧಿಸುವೆ ಎಂಬ ಸಂಸದ ಜಿ. ಎಂ.ಸಿದ್ದೇಶ್ವರ ಅವರ ಹೇಳಿಕೆಯಿಂದ ನನಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.
ತಾಲೂಕಿನ ಹಿರೇಮಠ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಮನೆ,ಮನೆ ಅಭಿಯಾನದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಹೊನ್ನಾಳಿ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಸ್ಪರ್ಧಿಸುವೆ ಎಂದು ಹೇಳಿದ್ದರೆ ನನಗೆ ಬೇಸರವಾಗುತ್ತಿರಲಿಲ್ಲ. ಆದರೆ, ಸಂಸದರು ನಮ್ಮ ಜನಾಂಗದವರು ಜಾಸ್ತಿ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದ್ದು ನನಗೆ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿದೆ ಎಂದರು.

ನಾನು ಚುನಾವಣೆಯಲ್ಲಿ ಸೋತಾಗ ಕಾರ್ಯಕರ್ತರು, ಮುಖಂಡರು ಲೋಕಸಭಾ ಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡಿದ್ದರು. ಜತೆಗೆ, ಸಿದ್ದೇಶಣ್ಣ ಅವರು ಕಳೆದ ಚುನಾವಣೆಯಲ್ಲಿ ಇದು ನನ್ನ ಕೊನೇ ಚುನಾವಣೆ ಎಂದು ಹೇಳಿದ್ದರು. ಹಾಗಾಗಿ, ನಾನು ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದೆ ಅಷ್ಟೇ ಎಂದರು.

ಒಂದು ವೇಳೆ ಪಕ್ಷ ಬಯಸಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿದರೆ ನಾನು ಅಭ್ಯರ್ಥಿಯಾಗುತ್ತೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಕುರಾನ್ ಗ್ರಂಥ ವಿತರಣೆ ಸರಿಯಲ್ಲ:
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹೊಸ ಬೆಳವಣಿಗೆಗಳು ಆಗುತ್ತಿವೆ. ಬೆಂಗಳೂರಿನ ಮಹಾನಗರದ ಪೊಲೀಸ್ ಠಾಣೆ ಒಂದರಲ್ಲಿ ಸಿಬ್ಬಂದಿಗೆ ಕುರಾನ್ ಗ್ರಂಥ ವಿತರಣೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಹಾಗೇನಾದರೂ ಮಾಡಿದ್ದರೆ ಅದು ತಪ್ಪು. ಇದು ಧರ್ಮ -ಧರ್ಮಗಳ ನಡುವೆ ಸಂಘರ್ಷವನ್ನುಂಟು ಮಾಡುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ದೇ ತಡ ಭಯೋತ್ಪಾದಕರು ವಿಧ್ವಂಸಕ ಕೃತ್ಯ ಎಸಗಲು ಸ್ಕೆಚ್ ಹಾಕುತ್ತಿದ್ದಾರೆ. ಈ ಹಿನ್ನ್ನೆಲೆಯಲ್ಲಿ ಸ್ಫೋಟಕ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು ಐದು ಜನರ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ ಎಂದು ರೇಣುಕಾಚಾರ್ಯ ತಿಳಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್, ಹಿರೇಮಠ ರಾಜು, ರೈತ ಮುಖಂಡ ಬಸವರಾಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net