

ನೀರಿನ ತೆರಿಗೆ ಬಾಕಿ ಹಿನ್ನೆಲೆ ಬಡ್ಡಿ ಮನ್ನಾ ಮಾಡಿ ಅಸಲು ಕಟ್ಟುವುದಕ್ಕೆ ಅನುಮತಿ ನೀಡಲು ಚಿಂತಿಸಿದ್ದು, ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬೆಂಗಳೂರಿನ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ ಆಯೋಜಿಸಿದ್ದ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಪಾಲಿಕೆಯಲ್ಲಿ ಇಲ್ಲಿವರೆಗೂ 200 ಕೋಟಿ ರೂ. ನೀರಿನ ತೆರಿಗೆ ಬಾಕಿ ಇದೆ. ಬಡ ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿ ಬಾಕಿ ಉಳಿಸಿಕೊಂಡಿರುವುದರಿಂದ ಬಡ್ಡಿ ಮನ್ನಾ ಮಾಡಿ ಅಸಲು ಕಟ್ಟುವುದಕ್ಕೆ ಅನುಮತಿ ನೀಡಲು ಸರ್ಕಾರ ಚಿಂತಿಸಿದೆ. ಇದಕ್ಕಾಗಿ ಪಾಲಿಕೆ ವತಿಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಪಾಲಿಕೆಯ ವಾಹನಗಳನ್ನು ದುರಸ್ತಿ ಮಾಡಲು ಕಳೆದ 5 ವರ್ಷಗಳಿಂದ ಟೆಂಡರ್ ಕರೆಯದೆ ಒಬ್ಬರಿಗೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಟೆಂಡರ್ ಕರೆಯದೆ ಏಕ ವ್ಯಕ್ತಿಗೆ ನೀಡಿರುವುದು ಲೋಪವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 15 ದಿನಗಳೊಳಗೆ ವರದಿ ನೀಡುವಂತೆ ಪಾಲಿಕೆ ಆಯುಕ್ತರಿಗೆ ತಾಕೀತು ಮಾಡಿದರು.