ಸೋಸಲೆ ಶ್ರೀಗಳಿಂದ ವರ್ಣಗಳ ಮೂಲಕ ಪರಮಾತ್ಮನ ಚಿಂತನೆ ಕೃತಿ ಬಿಡುಗಡೆ

14
Published on

ಮೈಸೂರು: ಪೂಜೆಯ ಸಂದರ್ಭದಲ್ಲಿ ಅನುಸಂಧಾನ ಮತ್ತು ಅನುಷ್ಠಾನಗಳು ಪ್ರಧಾನ ಎಂದು ಸೋಸಲೆ ಶ್ರೀ ವ್ಯಾಸರಾಜರ ಮಠದ ಶ್ರೀವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಭಕ್ತರಿಗೆ ಸಲಹೆ ನೀಡಿದರು.
ನಗರದ ಕೃಷ್ಣಮೂರ್ತಿಪುರಂನ ಸೋಸಲೆ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಬುಧವಾರ ಶ್ರೀರಾಮ ನವಮಿ ಮಹಾ ಉತ್ಸವದಲ್ಲಿ ನಿವೃತ್ತ ಪ್ರಾಧ್ಯಾಪಕ, ಹಿರಿಯ ಲೇಖಕ ಡಾ.ಕೆ. ರಾಘವೇಂದ್ರರಾವ್ ಅವರ ‘ವರ್ಣಗಳ ಮೂಲಕ ಪರಮಾತ್ಮನ ಚಿಂತನೆ’ ಕೃತಿ ಬಿಡುಗಡೆಗೊಳಿಸಿ ಅವರು ಅನುಗ್ರಹ ಸಂದೇಶ ನೀಡಿದರು.
ನಾವು ನಿತ್ಯ ದೇವತಾರಾಧನೆಗೂ ಮುನ್ನ ವಿವಿಧ ರೀತಿಯ ಅನುಷ್ಠಾನ ಮಾಡಿಕೊಳ್ಳುವುದು ಪದ್ಧತಿ. ದ್ವೈತ ಸಿದ್ಧಾಂತಿ ಆಚಾರ್ಯ ಶ್ರೀ ಮಧ್ವರು ಸಾಧಕನ ಮಾರ್ಗ ಸುಲಭವಾಗಲೆಂದು ವಿವಿಧ ಮಂತ್ರಗಳನ್ನು ಒಳಗೊಂಡ ‘ತಂತ್ರಸಾರ’ ಗ್ರಂಥ ರಚಿಸಿದ್ದಾರೆ. ಬ್ರಹ್ಮಸೂತ್ರ ಭಾಷ್ಯಾದಿ ಅನೇಕ ಮಹತ್ತರ ಕೃತಿಗಳಲ್ಲಿ ಅಪೂರ್ವ ಪ್ರಮೇಯಗಳನ್ನು ಪ್ರತಿಪಾದಿಸಿದ್ದಾರೆ. ಅಲ್ಲಿರುವ ಒಂದೊಂದು ಪದಗಳೂ ಭಗವಂತನ ಗುಣಗಳನ್ನು ವರ್ಣಿಸಿವೆ. ನಮ್ಮ ದೇಹದ ವಿವಿಧ ಭಾಗಗಳಲ್ಲಿ ಇರುವ ಪರಮಾತ್ಮನ ಸ್ವರೂಪಾದಿ ಚಿಂತನೆಗಳು ಅಲ್ಲಿ ಅಡಗಿವೆ. ಅದೆಲ್ಲವನ್ನೂ ಬಹು ವರ್ಷಗಳ ಅಧ್ಯಯನದಿಂದ ಸರಳ ಕನ್ನಡದಲ್ಲಿ ರಾಘವೇಂದ್ರ ರಾವ್ ಸಂಗ್ರಹಿಸಿ ಸರಳ ಕನ್ನಡ ಕೃತಿ ರೂಪದಲ್ಲಿ ಹೊರತಂದಿದ್ದಾರೆ ಎಂದು ಶ್ರೀಗಳು ಶ್ಲಾಘಿಸಿದರು.
ಸನಾತನ ಧರ್ಮ, ಶಾಸ್ತ್ರ ಮತ್ತು ಸಂಪ್ರದಾಯಗಳನ್ನು, ತಂತ್ರಸಾರೋಕ್ತ ಪೂಜಾ ಪದ್ಧತಿ ಅನುಸರಿಸುವ ಜಿಜ್ಞಾಸುಗಳಿಗೆ ಇದು ಕಣ್ಣು ತೆರೆಸುವ ಕೃತಿ. ಕೈ ದೀವಿಗೆಯಾಗಿದೆ ಎಂದರು.
ಕೃತಿಕಾರ ಡಾ.ಕೆ. ರಾಘವೇಂದ್ರ ರಾವ್, ವಿಜಯಲಕ್ಷ್ಮೀ ರಾಘವೇಂದ್ರ, ಮುರಳೀಧರ ಇತರರು ಇದ್ದರು. ಇದಕ್ಕೂ ಮುನ್ನ ಸಂಸ್ಥಾನ ಪ್ರತಿಮೆಗಳಿಗೆ ಶ್ರಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net